ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಗೂ ಪ್ರತಿನಿಧಿಗಳೊಂದಿಗೆ ಡಿಸಿ ಲತಾಕುಮಾರಿ ಸಭೆ ನಡೆಸಿದರು. ರಘು, ಕೆ.ಎಸ್.ಲಿಂಗೇಶ್, ಎಸ್.ದ್ಯಾವೇಗೌಡ, ಅಮಿತ್‌ಶೆಟ್ಟಿ, ಯೋಗೇಶ್, ನವೀನ್‌ಕುಮಾರ್ ಇತರರಿದ್ದರು.
- ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಿ
- ರಾಜಕೀಯ ಪಕ್ಷಗಳ ಮುಖಂಡರಿಗೆ ಡಿಸಿ ಮನವಿ
- ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ನೀಡಿದ ಲತಾಕುಮಾರಿ
ಹಾಸನ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಹಾಗೂ ಪ್ರತಿನಿಧಿಗಳು ಹೆಚ್ಚಿನ ಗಮನಹರಿಸಿ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕಾರಿಯಾಗಬೇಕು. ಪ್ರತಿ ಬೂತ್‌ಗೆ ಏಜೆಂಟ್ ನೇಮಕ ಮಾಡಬೇಕು. ಚುನಾವಣಾ ಸಹಾಯವಾಣಿ ಜೂ.1 ರಿಂದ ಕಾರ್ಯನಿರ್ವಹಿಸಲಿದ್ದು, ಇದರ ಸಹಾಯ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಗೂ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗವು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ ಪಟ್ಟಿ ತಯಾರಿಸುವ ಪ್ರಕ್ರಿಯೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರತಿ ಬೂತ್‌ಗೆ ಮತದಾರರ ಏಜೆಂಟ್ ನೇಮಕ ಮಾಡಿ ಅದರ ಪಟ್ಟಿ ನೀಡುವ ಮೂಲಕ ಆರೋಗ್ಯಕರ ಮತದಾರರ ಪಟ್ಟಿ ತಯಾರಿಸಲು ಸಹಕಾರ ನೀಡುವಂತೆ ತಿಳಿಸಿದರಲ್ಲದೆ, ಯಾವುದೇ ಪ್ರಜೆಯು ಮತದಾನದಿಂದ ವಂಚಿತರಾಗದಂತೆ ಗಮನಹರಿಸಬೇಕು ಎಂದು ತಿಳಿಸಿದರು.
ಪ್ರಜಾಪ್ರಾತಿನಿಧ್ಯ ಕಾಯ್ದೆ ಅಡಿಯಲ್ಲಿ ಮತದಾರರ ಪಟ್ಟಿ ತಯಾರಿಸುವುದು ಸಂವಿಧಾನಾತ್ಮಕ ಕರ್ತವ್ಯ. ಈ ನಿಟ್ಟಿನಲ್ಲಿ ದೇಶದಾದ್ಯಂತ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮ ನಡೆಯುತ್ತಿದ್ದು, 2025ರ ಮತದಾರರ ಪಟ್ಟಿಯಲ್ಲಿರುವ ಹೆಸರಿಗೆ ಸಂಬಂಧಿಸಿದಂತೆ 2002ರಲ್ಲಿರುವ ಮತದಾರರ ಪಟ್ಟಿಯ ಮತದಾರರ ಕುಟುಂಬದ ಸಂತತಿಗಳಾಗಿ ಮ್ಯಾಪಿಂಗ್ ಮಾಡಿ ಲಿಂಕ್ ಮಾಡಲಾಗುತ್ತಿದೆ. ಈಗಾಗಲೇ ಶೇ.91ರಷ್ಟು ಕಾರ್ಯ ಆಗಿದ್ದು, ಮ್ಯಾಪಿಂಗ್ ಕಾರ್ಯ ಮುಂದುವರಿದಿದೆ. ಜೂನ್ 16ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಜೂ. 30ರಿಂದ ಜು. 29ವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ತಮ್ಮ ಹೆಸರು ಮತ್ತಿತರ ಮಾಹಿತಿ ದಾಖಲಾಗಿರುವ ನಮೂನೆಯನ್ನು ದ್ವಿಪ್ರತಿಯಲ್ಲಿ ನೀಡುತ್ತಾರೆ. ಅದನ್ನು ಮತದಾರರು ಓದಿ ಸರಿಯಿದೆ ಎಂದು ಪರಿಶೀಲಿಸಿ ಸಹಿ ಮಾಡಿ ನೀಡಿದ ಪ್ರತಿಯನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಲಾಗುವುದು ಎಂದು ತಿಳಿಸಿದರು.
ಪೂರ್ವ ತಯಾರಿಗಾಗಿ ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಏಜೆಂಟ್‌ಗಳಿಗೆ ತರಬೇತಿ ನೀಡಲಾಗುವುದು. ಮತಗಟ್ಟೆ ಅಧಿಕಾರಿಗಳು ನಿವೃತ್ತಿ ಅಥವಾ ವರ್ಗಾವಣೆ ಆಗಿದ್ದಲ್ಲಿ ಬೇರೆಯವರನ್ನು ನೇಮಕ ಮಾಡಲು ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮತಗಟ್ಟೆ ಅಧಿಕಾರಿಗಳ ಹೆಸರು, ಫೋನ್ ನಂಬರ್‌ಗಳನ್ನು ಎಲ್ಲ ರಾಜಕೀಯ ಪಕ್ಷಗಳ ನಾಯಕರು ಹಾಗೂ ಪ್ರತಿನಿಧಿಗಳಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪೂರ್ವ ತಯಾರಿ, ತರಬೇತಿ ಮತ್ತು ಮುದ್ರಣ ಜೂ.26ರಿಂದ 29, ಆ.5ರಂದು ಕರಡು ಪ್ರತಿ ಪ್ರಕಟಣೆ ಮಾಡಲಾಗುವುದು. ಆಕ್ಷೇಪಣೆ ಸಲ್ಲಿಸಲು ಆ.5ರಿಂದ ಸೆಪ್ಟೆಂಬರ್ 4ವರೆಗೆ ಅವಕಾಶ ಇರುತ್ತದೆ. ಅಂತಿಮ ಮತದಾರರ ಪಟ್ಟಿ ದಿನಾಂಕ ಅ.7ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ವರ್ಷದಲ್ಲಿ ನಾಲ್ಕು ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತದೆ. ಆ ಸಂದರ್ಭದಲ್ಲಿ 18 ವರ್ಷ ಪೂರೈಸಿದವರು ಹೊಸ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಪ್ರತಿನಿಧಿ ರಘು, ಜೆಡಿಎಸ್ ಪಕ್ಷದಿಂದ ಕೆ.ಎಸ್.ಲಿಂಗೇಶ್, ಎಸ್.ದ್ಯಾವೇಗೌಡ, ಭಾರತೀಯ ಜನತಾ ಪಕ್ಷದ ಅಮಿತ್ ಶೆಟ್ಟಿ, ಆಮ್ ಆದ್ಮಿ ಪಕ್ಷದ ಯೋಗೇಶ್ ಕಮ್ಯುನಿಸ್ಟ್ ಪಕ್ಷದಿಂದ ನವೀನ್‌ಕುಮಾರ್ ಸಭೆಯಲ್ಲಿ ಹಾಜರಿದ್ದರು.