ಶ್ರವಣಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಕೆ.ಅಶೋಕ್ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು. ಪರಮ ದೇವರಾಜೇಗೌಡ, ಎ.ಆರ್.ಶಿವರಾಜ್, ಎಸ್.ಬಿ.ಜಗದೀಶ್, ಶರತ್ ಕುಮಾರ್ ಇದ್ದರು. 
ಹಾಸನ

ಅಧ್ಯಕ್ಷರಾಗಿ ಅಶೋಕ್ ಅವಿರೋಧ ಆಯ್ಕೆ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಶ್ರವಣಬೆಳಗೊಳ ಪ್ಯಾಕ್ಸ್ ಅಧ್ಯಕ್ಷರಾಗಿ ಚುನಾಯಿತ
ಶ್ರವಣಬೆಳಗೊಳ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಕೆ.ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
ಎಸ್.ಪಿ.ಶರತ್‌ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಎಸ್.ಕೆ.ಅಶೋಕ್ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು. 
ಶಾಸಕ ಸಿ.ಎನ್.ಬಾಲಕೃಷ್ಣ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಸಾಲ ಸೌಲಭ್ಯ ಒದಗಿಸುವುದರಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಇತ್ತೀಚೆಗೆ ಶ್ರವಣಬೆಳಗೊಳಕ್ಕೆ ತಾಲೂಕಿನಲ್ಲೇ ಪ್ರಪ್ರಥಮವಾಗಿ ವಿದ್ಯುತ್ ಯುಜಿ ಕೇಬಲ್ ಅಳವಡಿಕೆಗೆ 5 ಕೋಟಿ ರೂಪಾಯಿ ಅನುದಾನ ತರಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ನೂತನ ಅಧ್ಯಕ್ಷ ಎಸ್.ಕೆ.ಅಶೋಕ್ ಮಾತನಾಡಿ, ಶಾಸಕ ಸಿ.ಎನ್.ಬಾಲಕೃಷ್ಣ ಅವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ನಮ್ಮ ಸಂಘದಲ್ಲಿ ರೈತರಿಗೆ ಬೆಳೆ ಸಾಲ, ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಗುಂಪು ಸಾಲ ಸೇರಿದಂತೆ ಅಂದಾಜು 14 ಕೋಟಿ ರೂ. ವ್ಯವಹಾರ - ವಹಿವಾಟು ನಡೆಯುತ್ತಿದ್ದು, ಮುಂದೆಯು ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆ ಹಾಗೂ ಹೆಚ್ಚುವರಿ ಸಾಲ ಸೌಲಭ್ಯ ಸೇರಿದಂತೆ ರೈತರ ಪರವಾಗಿ ಉತ್ತಮ ಕೆಲಸ ಮಾಡಲಾಗುವುದು. ಎಲ್ಲ ನಿರ್ದೇಶಕರ ಸಮನ್ವಯದೊಂದಿಗೆ ಷೇರುದಾರರು ಹಾಗೂ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.
ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯೇಂದ್ರ ಹಾಗೂ ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ಮಧು ಕರ್ತವ್ಯ ನಿರ್ವಹಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಪರಮ ದೇವರಾಜೇಗೌಡ, ಸೊಸೈಟಿ ಮಾಜಿ ಅಧ್ಯಕ್ಷ ಎಸ್.ಪಿ.ಶರತ್ ಕುಮಾರ್, ಉಪಾಧ್ಯಕ್ಷೆ ಕಮಲಮ್ಮ ಚಂದ್ರಶೇಖರ್, ನಿರ್ದೇಶಕರಾದ ಎ.ಆರ್.ಜೀವನ್, ಕೆ.ಎಂ.ಲಕ್ಕೇಗೌಡ, ಕೆ.ಎನ್.ಮಂಜೇಗೌಡ, ಧರ್ಮರಾಜು, ಎಸ್.ಎಂ.ಪ್ರದೀಪ್, ಕೆ.ಆರ್.ಕುಮಾರ್, ಶೋಭಾ ಕೃಷ್ಣೇಗೌಡ, ನಾಗರಾಜ್ ನಾಯಕ, ಎಂ.ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷ, ಮಾಜಿ ಅಧ್ಯಕ್ಷರಾದ ಎಸ್.ಎಂ.ಲಕ್ಷ್ಮಣ್, ಹೇಮಾ ಪ್ರಭಾಕರ್, ಸಿಇಒ ಮಂಜೇಗೌಡ ಮತ್ತು ಸಿಬ್ಬಂದಿ, ಷೇರುದಾರರು ಉಪಸ್ಥಿತರಿದ್ದರು.