ಕೆ.ಟಿ.ಶಿವಪ್ರಸಾದ್ ಅವರ ಅಂತಿಮ ದರ್ಶನವನ್ನು ಸಂಸದ ಶ್ರೇಯಸ್ ಪಟೇಲ್ ಪಡೆದರು. ನಾಯಕರಹಳ್ಳಿ ಮಂಜೇಗೌಡ, ಮುದ್ದೇಗೌಡ ಇತರರಿದ್ದರು.
- ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಪಂಚಭೂತಗಳಲ್ಲಿ ಲೀನ
- ಅಂತಿಮ ದರ್ಶನ ಪಡೆದ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್
ಹಾಸನ: ಅನಾರೋಗ್ಯದಿಂದ ನಿಧನರಾದ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ (78) ಅವರ ಅಂತ್ಯಕ್ರಿಯೆ ಬುಧವಾರ ಬಿಟ್ಟಗೌಡನಹಳ್ಳಿಯ ಚಿತಾಗಾರದಲ್ಲಿ ನಡೆಯಿತು.
ಅವರ ಆಶಯದಂತೆಯೇ ಯಾವುದೇ ಸಂಪ್ರದಾಯ ಇಲ್ಲದೆ, ಚಿತೆಗೆ ಸಹೋದರರಾದ ಸುದರ್ಶನ್ ಕಾರ್ಲೆ, ಮಹೇಂದ್ರ ಕಾರ್ಲೆ ಅಗ್ನಿಸ್ಪರ್ಶ ಮಾಡಿದರು.
ಇದಕ್ಕೂ ಮೊದಲು ನಗರದ ಕಲಾಭವನದ ಮುಂಭಾಗ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಸಾಹಿತಿ ಬಾನು ಮುಷ್ತಾಕ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ, ಎಎಸ್ಪಿ ಶ್ರೀನಿಧಿ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಹಿರಿಯ ದಲಿತ ಮುಖಂಡರಾದ ನಾರಾಯಣದಾಸ್, ಎಚ್.ಕೆ.ಸಂದೇಶ್, ಕೃಷ್ಣದಾಸ್, ಈರಯ್ಯ, ಜಯಕುಮಾರ್, ಸಾಹಿತಿಗಳಾದ ರೂಪಾ ಹಾಸನ, ಕೆ.ಟಿ.ಜಯಶ್ರೀ, ಕಣಗಾಲ್ ಮೂರ್ತಿ, ಗ್ಯಾರಂಟಿ ರಾಮಣ್ಣ, ಕರ್ನಾಟಕ ಲಲಿತಾ ಅಕಾಡೆಮಿ ಮಾಜಿ ಅಧ್ಯಕ್ಷ ಕೃಷ್ಣಶೆಟ್ಟಿ ಇತರರು ಅಂತಿಮ ದರ್ಶನ ಪಡೆದರು.
ಶಿವಪ್ರಸಾದ್ ಅವರದು ಬಂಡಾಯದ ಬದುಕು. ಕಲೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ, ಕಲೆಯ ಆರಾಧಕರಾಗಿದ್ದರು. ಮುಂದಿನ ಜನಾಂಗಕ್ಕೆ ಅವರ ತ್ಯಾಗವನ್ನು ದಾಟಿಸುವ ಅಗತ್ಯ ಇದೆ.
ಸಾಹಿತಿ, ಬೂಕರ್ ಪ್ರಶಸ್ತಿ ಪುರಸ್ಕೃತೆ
ಮಾಜಿ ಪ್ರಧಾನಿ ದೇವೇಗೌಡ ಸಂತಾಪ
ಕೆ.ಟಿ.ಶಿವಪ್ರಸಾದ್ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಂತಾಪ ಸೂಚಿಸಿದ್ದಾರೆ. ಒಬ್ಬ ಮೇರು ಕಲಾವಿದರಾಗಿದ್ದರೂ ಹಮ್ಮು-ಬಿಮ್ಮು ಇರಲಿಲ್ಲ. ರೈತಸಂಘ, ದಲಿತ ಹಾಗೂ ಸಮಾಜಮುಖಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕಲೆಯ ಬಗ್ಗೆ ಅದರಲ್ಲೂ ಕ್ಯಾನ್ವಾಸ್ ಕಲೆಯಲ್ಲಿ ಹೆಚ್ಚು ಪಳಗಿದ್ದರು. ಈಗ ಅವರು ನಮ್ಮೊಡನಿಲ್ಲ ಎಂಬ ನೋವಿದ್ದರೂ ಅವರ ಕಲೆಯ ಅಮರ ಹೆಜ್ಜೆ ಗುರುತು ನಮ್ಮ ನಡುವೆ ಸದಾ ಇರುತ್ತದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ನಮ್ಮ ಜಿಲ್ಲೆಯ ಜತೆಗೆ ನಾಡು, ದೇಶಕ್ಕೆ ಹೆಮ್ಮೆ ತಂದಿದ್ದ ಕೆ.ಟಿ.ಶಿವಪ್ರಸಾದ್ ನಿಧನ ಅತೀವ ನೋವು ತಂದಿದೆ. ಅವರ ಸಾಧನೆ ಇಂದಿನ ಕಿರಿಯರಿಗೆ ಮಾರ್ಗದರ್ಶನ ಮತ್ತು ದಾರಿದೀಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಕೆ.ಟಿ.ಶಿವಪ್ರಸಾದ್ ಅವರಿದ್ದ ಕಾಲದಲ್ಲಿ ನಾವು ಬದುಕಿದ್ದೆವು ಎಂಬುದು ಹೆಮ್ಮೆಯ ಸಂಗತಿ. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಅವರು ಕಲಾಕ್ಷೇತ್ರ ಆಯ್ದುಕೊಂಡ ರೀತಿಯೇ ಅಚ್ಚರಿ. ಅವರ ಹೆಸರು ಜಿಲ್ಲೆಯಲ್ಲಿ ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ಕೈಗೊಳ್ಳುವ ಯೋಜನೆಗೆ ಸಹಕಾರ ನೀಡುವೆ.