ಅರಸೀಕೆರೆ ನಗರದ ಸಹಸ್ರಕೂಟ ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿದರು. ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ , ಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರು ಇದ್ದರು. 
ಹಾಸನ

ಜಿನಮಂದಿರಗಳ ಸಂರಕ್ಷಣೆಗೆ ಸಂಕಲ್ಪ ಮಾಡಿರಿ

ಅರಸೀಕೆರೆ: ಜಗತ್ತಿಗೆ ಶಾಂತಿ, ಅಹಿಂಸೆ ಸಂದೇಶ ಪಸರಿಸಿದ ಜೈನ ಧರ್ಮ ಹಾಗೂ ಜಿನಮಂದಿರಗಳ ಸಂರಕ್ಷಣೆಯ ಸಂಕಲ್ಪ ಮಾಡಬೇಕು ಎಂದು ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಕರೆ ನೀಡಿದರು.
ನಗರದ ಸಹಸ್ರಕೂಟ ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಬುಧವಾರ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇಶದ ವಿವಿಧ ಭಾಗಗಳಿಂದ ಬರುವ ಯಾತ್ರಾರ್ಥಿಗಳಿಗೆ ಜೈನ ಸಂಪ್ರದಾಯ ಪರಿಚಯದ ಜತೆಗೆ ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಕ್ಷೇತ್ರಕ್ಕೆ ಸ್ವಾಗತ ಕೋರುವ ಮಹಾದ್ವಾರವಾಗಿ ತಾಲೂಕು ಗುರುತಿಸಿಕೊಂಡಿದೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಆಗಮಿಸುವ ಮುನಿವರ್ಯರ ನೆಚ್ಚಿನ ತಾಣವಾಗಿದೆ. ದಿಗಂಬರ ಜೈನ ಸಮುದಾಯ ಅನುಯಾಯಿಗಳು ಇಲ್ಲಿಯ ಸಹಸ್ರಕೂಟ ಜಿನಮಂದಿರಕ್ಕೆ ಭೇಟಿ ನೀಡುವ ಸಂಪ್ರದಾಯವಿಟ್ಟುಕೊಂಡಿದ್ದಾರೆ. ಹೊಯ್ಸಳರ ಆಡಳಿತದ ಅವಧಿಯಲ್ಲಿ ಸಹಸ್ರ ಕೂಟ ಜಿನಮಂದಿರ ನಿರ್ಮಾಣದ ಇತಿಹಾಸವಿರುವ ಶಾಸನಗಳು ಲಭ್ಯವಿದೆ ಎಂದರು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿನಮಂದಿರಕ್ಕೆ ಮೂಲ ಸೌಲಭ್ಯಗಳೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ದಿಗಂಬರ, ಶ್ವೇತಾಂಬರ ಜೈನ ಸೇರಿದಂತೆ ಉಪಪಂಗಡಗಳು ಸಂಘಟಿತರಾಗುವ ಮೂಲಕ ನಮ್ಮ ಪುರಾತನ ಸ್ಮಾರಕಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನಮಠದ ಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಸಹಸ್ರ ಜೀನ ಕೂಟದಲ್ಲಿರುವ 1008 ತೀರ್ಥಂಕರರ ದರ್ಶನವು ಕೋಟಿ ಪುಣ್ಯ ಫಲದಷ್ಟೇ ಪ್ರಾಮುಖ್ಯತೆ ಪಡೆದಿದೆ. ಗರ್ಭಗುಡಿಯಲ್ಲಿರುವ ತೀರ್ಥಂಕರರ ಅವಾಸಸ್ಥಾನಕ್ಕೆ ಪ್ರದಕ್ಷಿಣೆ ಹಾಕುವುದರ ಜತೆಯಲ್ಲಿ ಅಲ್ಲಿರುವ 1008 ತೀರ್ಥಂಕರರ ದರ್ಶನ ಪಡೆದರೆ ಬದುಕು ಸಾರ್ಥಕವಾಗಲಿದೆ. ದಶಕಗಳ ಹಿಂದೆ 800 ಜೈನ ಕುಟುಂಬಗಳಿದ್ದ ಸಮುದಾಯ ಪ್ರಸ್ತುತ 80ರ ಆಸುಪಾಸಿನಲ್ಲಿದೆ. ಗತಕಾಲದಲ್ಲಿ ನಡೆದ ವೈಪರಿತ್ಯದಿಂದ ನಮ್ಮ ಪುಣ್ಯ ಕ್ಷೇತ್ರಗಳು ದಾಳಿಗೆ ಒಳಗಾದವು. ದಾನ ನೀಡುವುದರಿಂದ ಸ್ವರ್ಗ, ಪಾಲನೆ ಮಾಡುವುದರಿಂದ ಮುಕ್ತಿ ದೊರೆಯಲಿದ್ದು, ಕಾಲ ಗರ್ಭದಲ್ಲಿ ಸಾವಿರಾರು ಜಿನದೇವಾಲಗಳು ಅಡಗಿದ್ದು ಬೆಳಕಿಗೆ ತರಬೇಕಾದರೆ ಎಲ್ಲರೂ ಸ್ವಯಂ ಪ್ರೇರಿತವಾಗಿ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಮುಂದಿನ ದಿನಗಳಲ್ಲಿ ದಿಗಂಬರ ಮತ್ತು ಜೈನ ದೇವಾಲಯಗಳನ್ನು ಸಂರಕ್ಷಿಸುವ ದೃಢ ಸಂಕಲ್ಪ ಆಗಬೇಕಿದ್ದು, ಸ್ವಾರ್ಥ ಮನೋಭಾವನೆ ಇಲ್ಲದೇ ವ್ಯಕ್ತಿ ಶಕ್ತಿಗಿಂತ ಆತ್ಮ ಶಕ್ತಿ ಹೆಚ್ಚು ಎಂಬಂತೆ ದೈವಾನುಗ್ರಹ ಪಡೆಯಲು ಮುಂದಾಗಬೇಕು. ಈ ಜಿನಮಂದಿರ ಸಂರಕ್ಷಿಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂಬುದನ್ನು ಮರೆಯಬಾರದು ಎಂದರು.
ದೇವಾಲಯದಲ್ಲಿರುವ ಸಹಸ್ರಕೂಟ ಜಿನಬಿಂಬಕ್ಕೆ 108 ಕಳಸಾಭಿಷೇಕ ಹಾಗೂ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಶ್ರೀ ಪದ್ಮಾವತಿ, ಶ್ರೀ ಜ್ವಾಲಮಾಲಿನಿ, ಶ್ರೀ ಶಾರದ ದೇವಿಯವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಶ್ರೀ ಆರತಿಪುರ ದಿಗಂಬರ ಜೈನ ಮಠದ ಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರು ಇದ್ದರು. ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.