ಅರಸೀಕೆರೆ ನಗರದ ಬಸ್ ನಿಲ್ದಾಣ ಕಾಮಗಾರಿಗೆ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು. ಜಿ.ಬಿ. ಶಶಿಧರ್ ಅರುಣ್ ಕುಮಾರ್, ಧರ್ಮಶೇಖರ್, ಬಾಲಮುರುಗನ್, ಗೌಸ್ ಖಾನ್ ಇದ್ದಾರೆ.
ಅರಸೀಕೆರೆ: ಪ್ರಯಾಣಿಕರ ಹಿತಕ್ಕಾಗಿ ಬಸ್ ನಿಲ್ದಾಣದ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆಗೆ ಹೊಂದಿಕೊಂಡಂತಿರುವ ಹಳೆಯ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಸೋಮವಾರ ಅಂದಾಜು 30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಗರದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣ ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ, ಹಾಸನ ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದೆ. ಬಸ್ ಹಾಗೂ ಪ್ರಯಾಣಿಕರ ಹಿತ ಗಮನದಲ್ಲಿಟ್ಟುಕೊಂಡು ವಿಸ್ತರಣೆ ಕೆಲಸ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುವ ಬಸ್ ನಿಲುಗಡೆಗೆ ಅನುಕೂಲವಾಗಲಿದೆ. ದೂರದೃಷ್ಟಿ ಹಾಗೂ ಆಧುನಿಕ ಸವಲತ್ತುಗಳನ್ನು ನಿಲ್ದಾಣ ಹೊಂದಿರಲಿದೆ ಎಂದು ಹೇಳಿದರು.
ಬಿಜೆಪಿಯ ಕೆಲ ಶಾಸಕರು ವಿಧಾನಸಭೆಯಲ್ಲಿ ಪ್ರಚೋದನೆ ನೀಡಿದ್ದರಿಂದ ಕೋಪಗೊಂಡು ಆವೇಶದಲ್ಲಿ ಮಾತನಾಡಿದ್ದೇನೆ. ವಿರೋಧಿ ಪಡೆಯವರು ಇದನ್ನೇ ದೊಡ್ಡದು ಮಾಡಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ಕೊಡುತ್ತಿಲ್ಲ. ಹೀಗೆ ಕೈ ಕಟ್ಟಿ ಕುಳಿತರೆ ಹೇಗೆ ಎಂದು ಬೇಸರಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್. ಅರುಣ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಶಿಧರ್, ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ ಮಾತನಾಡಿದರು. ಡಿಪೋ ಮ್ಯಾನೇಜರ್ ಕೃಷ್ಣಪ್ಪ, ಸಂಚಾರ ನಿಯಂತ್ರಕ ವಿರೂಪಾಕ್ಷಯ್ಯ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಬಾಲಮುರುಗನ್, ನಗರಸಭೆ ಮಾಜಿ ಸದಸ್ಯ ವೆಂಕಟಮುನಿ, ಜಿಟಿಎಸ್ ಗೌಸ್ ಖಾನ್, ಕಿರಣ್ ಕುಮಾರ್ ಇತರರು ಹಾಜರಿದ್ದರು. ಕಳೆದ ಜುಲೈನಲ್ಲಿ ಸಿಎಂ ಸಿದ್ದರಾಮಯ್ಯ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.