ಎಚ್.ಡಿ.ರೇವಣ್ಣ  
ಹಾಸನ

ಎನ್‌ಡಿಎ ವರಿಷ್ಠರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೈತ್ರಿ ನಿರ್ಧಾರ

ಅರಸೀಕೆರೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಎನ್‌ಡಿಎ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಜೆಡಿಎಸ್, ಬಿಜೆಪಿ ಮೈತ್ರಿ ವಿಷಯ ಮೇಲ್ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ತಾಲೂಕು, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ತಂತ್ರಗಾರಿಕೆ ರೂಪಿಸಬೇಕಿದೆ. ಆದರೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೊಬ್ಬರು ವ್ಯತಿರಿಕ್ತ ಹೇಳಿಕೆ ನೀಡಿ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. ಐವತ್ತು ಸಾವಿರಕ್ಕಿಂತ ಒಂದೇ ಒಂದು ಮತ ಕಡಿಮೆ ಪಡೆಯುವುದಿಲ್ಲವೆಂದು ಹೇಳಿ ಮನೆ ಸೇರಿದ್ದಾರೆ ಎಂದು ಮಾಜಿ ಶಾಸಕ ಪ್ರೀತಂಗೌಡ ಹೆಸರು ಪ್ರಸ್ತಾಪಿಸದೆ ಮಾತಿನಲ್ಲಿಯೇ ತಿವಿದರು.
ರಾಜಕೀಯ ಗೊತ್ತಿಲ್ಲದ ವ್ಯಕ್ತಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕರೆತಂದು ಮೂರು ಬಾರಿ ಟಿಕೆಟ್ ಕೊಟ್ಟು ಶಾಸಕನನ್ನಾಗಿ ಮಾಡಿದರು. ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಅಧಿಕಾರದ ಆಸೆಗೆ ದ್ರೋಹವೆಸಗಿ ಹೋಗಿದ್ದಾನೆ. ರಾಜಕಾರಣದಲ್ಲಿ ಹೆದರಿ ಓಡಿಹೋಗುವ, ಕೈ ಕಟ್ಟಿ ಕೂರುವ ಜಾಯಮಾನ ನನ್ನದಲ್ಲ. ರೇವಣ್ಣನ ಶಕ್ತಿ ಏನೆಂದು ಇನ್ನೆರಡು ವರ್ಷದ ಬಳಿಕ ನೋಡಲಿ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು ತಂದಿದ್ದೇನೆ. ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜು, ವಿದ್ಯುತ್ ವಿತರಣಾ ಮಾರ್ಗ ಸ್ಥಾಪನೆ, ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅನುದಾನದ ಮಹಾಪೂರವೇ ಜಿಲ್ಲೆಗೆ ಹರಿದು ಬಂದಿದೆ. ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಯಾರಿಂದಲೂ ಕಲಿಯುವ ಅಗತ್ಯವಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಕಾದು ನೋಡಿ ಎಂದು ತಿರುಗೇಟು ನೀಡಿದರು.
ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ರಾಂಪುರ ಶೇಖರಪ್ಪ, ಜನತಾ ಬಜಾರ್ ಅಧ್ಯಕ್ಷ ಗಂಡಸಿ ಮಂಜಣ್ಣ, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ಮಾಜಿ ಅಧ್ಯಕ್ಷ ವಿದ್ಯಾಧರ್, ವಕೀಲ ವಿವೇಕ್, ತಾಪಂ ಮಾಜಿ ಉಪಾಧ್ಯಕ್ಷ ಬಸವಲಿಂಗಪ್ಪ, ಮುಖಂಡರಾದ ಹುಲ್ಲೇಕೆರೆ ಕುಮಾರಣ್ಣ, ರಮೇಶ್ ನಾಯ್ಡು, ಗಣೇಶ್, ಯೋಗೀಶ್, ಲೋಕೇಶ್, ಪವನ್ ಮತ್ತಿತರರು ಹಾಜರಿದ್ದರು.