ಅರಸೀಕೆರೆ ತಾಲೂಕಿನ ಕರಗುಂದ ಗ್ರಾಮದ ಸರಹದ್ದಿನಲ್ಲಿ ಹಾದು ಹೋಗಿರುವ ಎತ್ತಿನಹೊಳೆ ನಾಲೆಗೆ ಭೇಟಿ ನೀಡಿದ ವೇಳೆ ರೈತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಿ.ಶಿವರಾಮು ಅವರಿಗೆ ಅಹವಾಲು ಸಲ್ಲಿಸಿದರು. ಆನಂದ್, ಶಶಿಧರ್, ರಾಮಸ್ವಾಮಿ, ವಸಂತ್, ಮಲ್ಲಿಕಾರ್ಜುನ ಇತರರಿದ್ದರು. 
ಹಾಸನ

ಜಾವಗಲ್ ಹೋಬಳಿ ಕೆರೆಗಳಿಗೆ ಎತ್ತಿನಹೊಳೆ ನೀರು

ಅರಸೀಕೆರೆ: ಎತ್ತಿನಹೊಳೆ ನಾಲೆ ಮೂಲಕ ಜಾವಗಲ್ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವಂತೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಮಾಜಿ ಸಚಿವ ಗಂಡಸಿ ಶಿವರಾಮು ಹೇಳಿದರು.
ತಾಲೂಕಿನ ಕರಗುಂದ ಗ್ರಾಮದ ಸರಹದ್ದಿನಲ್ಲಿ ಹಾದುಹೋಗಿರುವ ನಾಲೆಗೆ ಶುಕ್ರವಾರ ಭೇಟಿ ನೀಡಿ ಸುತ್ತಮುತ್ತಲಿನ ಗ್ರಾಮಸ್ಥರ ಅಹವಾಲು ಆಲಿಸಿ ಮಾತನಾಡಿದರು.
ಬಯಲು ಸೀಮೆಯ ಜನರಿಗೆ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಕೊಡಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನ ಮಾಡಲು ಶಕ್ತಿಮೀರಿ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಹಳೇಬೀಡು ದ್ವಾರಸಮುದ್ರದ ಕೆರೆಗೆ ನೀರು ಹರಿಸಿದ್ದು ಕೋಡಿ ಬಿದ್ದ ಬಳಿಕ ಬಾಗಿನ ಸಮರ್ಪಿಸಲಾಗಿದೆ. ಇದರೊಂದಿಗೆ ಅರಸೀಕೆರೆ ತಾಲೂಕಿನ 34 ಕೆರೆಗಳಿಗೂ ಸಿಎಂ ಡಿ.ಕೆ.ಶಿವಕುಮಾರ್ ಶೀಘ್ರದಲ್ಲೇ ನೀರು ಹರಿಸುವ ಕಾರ್ಯಕ್ಕೆ ಚಾಲನೆ ಕೊಡಲಿದ್ದಾರೆ. ಕಾಣದ ಕೈಗಳ ಕೈವಾಡದಿಂದ ಬೇಲೂರು ವಿಧಾನಸಭಾ ಕ್ಷೇತ್ರದ ಜಾವಗಲ್ ಹೋಬಳಿಯ ಗೊಲ್ಲರಹಳ್ಳಿ, ಕರಗುಂದ ಸೇರಿದಂತೆ ಸುತ್ತಮುತ್ತಲಿನ ಕೆರೆಗಳು ಪಟ್ಟಿಯಲ್ಲಿ ಸೇರಿಲ್ಲ. ಈಗಾಗಲೇ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದಿದ್ದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟು ಕೈ ಬಿಟ್ಟ ಕೆರೆಗಳ ಸೇರ್ಪಡೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದು ಭರವಸೆ ನೀಡಿದರು.
ಕಳೆದ ಎರಡು ತಿಂಗಳಿನಿಂದ ವರುಣ ಕೃಪೆ ತೋರದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನಡೆ ಎದುರಾಗಿದೆ. ಈಗಾಗಲೇ ಕೆರೆ-ಕಟ್ಟೆಗಳು ಸಂಪೂರ್ಣ ಬರಿದಾಗಿವೆ. ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ಅನ್ನದಾತರು ಪರದಾಡುವಂತಾಗಿದೆ. ಎತ್ತಿನಹೊಳೆ ನಾಲೆ ಮೂಲಕ ಕೆರೆ ತುಂಬಿಸದಿದ್ದರೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎನ್ನುವ ಆತಂಕವಿದ್ದು. ಸರ್ಕಾರದ ಗಮನ ಸೆಳೆಯುವುದಾಗಿ ಬಿ.ಶಿವರಾಮು ರೈತರಿಗೆ ಆತ್ಮವಿಶ್ವಾಸ ತುಂಬಿದರು.
ರೈತ ಮುಖಂಡ ಗೊಲ್ಲರಹಳ್ಳಿ ವಸಂತ ಕುಮಾರ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳು ನೀಡಿರುವ ವರದಿ ಅತ್ಯಂತ ಅವೈಜ್ಞಾನಿಕ ಮತ್ತು ಆತುರದಿಂದ ಕೂಡಿದೆ. ನಾಲೆ ಹಾದುಹೋಗುವ ಹಳ್ಳಿಗಳ ಆಸುಪಾಸಿನ ಕೆರೆಗಳನ್ನು ತುಂಬಿಸದಿರುವುದು ಸರಿಯಲ್ಲ. ದೊಡ್ಡ ಮೊತ್ತದ ಯೋಜನೆಗೆ ಜಮೀನು ಬಿಟ್ಟು ಕೊಟ್ಟ ರೈತರಿಗೆ ದೀಪದ ಕೆಳಗೆ ಕತ್ತಲು ಎನ್ನುವ ಸನ್ನಿವೇಶ ಎದುರಾಗಿದೆ. ವಾಸ್ತವ ಮನಗಂಡು ಕರಗುಂದ, ಗೊಲ್ಲರಹಳ್ಳಿ ಸೇರಿದಂತೆ ಇನ್ನಿತರ ಕೆರೆಗಳಿಗೂ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ರೈತರು ಬಿ.ಶಿವರಾಮು ಅವರಿಗೆ ಮನವಿ ಸಲ್ಲಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಬಿ.ಶಶಿಧರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಮಸ್ವಾಮಿ, ಮಲ್ಲಿಕಾರ್ಜುನ, ರವಿಶಂಕರ್, ನಂಜಮ್ಮ,ಷಡಕ್ಷರಿ ಸೇರಿದಂತೆ ನೂರಾರು ರೈತರು ಹಾಜರಿದ್ದರು.