ಅರಸೀಕೆರೆ ತಾಲೂಕು ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಸಂತೋಷ್ ಕುಮಾರ್, ಮೋಹನ್‌ಕುಮಾರ್, ಧರ್ಮಶೇಖರ್ ಇತರರಿದ್ದರು. 
ಹಾಸನ

ಸಮಸ್ಯೆ ಪರಿಹರಿಸಲು ಜನಸ್ಪಂದನ ಅತ್ಯುತ್ತಮ ವೇದಿಕೆ

ಅರಸೀಕೆರೆ: ನಾಗರಿಕರ ಸಮಸ್ಯೆ ಆಲಿಸಿ, ಪರಿಹರಿಸಲು ಜನಸ್ಪಂದನ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಹಣಿ, ವಿದ್ಯುತ್, ರಸ್ತೆ ಸಂಪರ್ಕ ಕಲ್ಪಿಸುವುದು, ಸೂರಿಲ್ಲದವರಿಗೆ ನೆರವು, ಜಮೀನು ಪೋಡಿ, ದುರಸ್ತು ಸೇರಿದಂತೆ ಕುಂದು ಕೊರತೆಗಳನ್ನು ಜನರು ಮುಕ್ತವಾಗಿ ಹಂಚಿಕೊಳ್ಳುವ ಉದ್ದೇಶದಿಂದ ಕಾಲ ಕಾಲಕ್ಕೆ ಸಭೆ ನಡೆಸಿ, ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಅಹವಾಲು ಹೊತ್ತು ತಂದವರನ್ನು ಸತಾಯಿಸಬಾರದು. ಬಿಪಿಎಲ್ ರದ್ದು, ಜಮೀನು ಮಂಜೂರು ಸೇರಿದಂತೆ ಹಲವು ಬಗೆಯ ತೊಂದರೆಗಳನ್ನು ನಿವಾರಿಸಲು ಕೋರಿ ನನ್ನ ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಅಧಿಕಾರಿಗಳು ವಾಸ್ತವ ಮನಗಂಡು ನಿರ್ಲಕ್ಷ್ಯ ತೋರದೆ ಕೆಲಸ ಮಾಡಿಕೊಡಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಮಾತನಾಡಿ, ಸಾಗುವಳಿ ಚೀಟಿ ವಿತರಣೆ, ಹಕ್ಕುಪತ್ರದ ಸಮಸ್ಯೆ ಹೆಚ್ಚಿದೆ. ಜಮೀನು ಸರ್ವೇ ವಿಷಯದಲ್ಲಿ ವಿಳಂಬವಾಗುತ್ತಿದ್ದು, ಸರಿಪಡಿಸಲಾಗುವುದು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ಕೆ.ಎಂ.ಶಿವಲಿಂಗೇಗೌಡರು ಶಾಸಕರಾಗಿ ಆಯ್ಕೆಯಾದ ಬಳಿಕ ಅಧಿಕಾರವನ್ನು ಜನರ ಬಳಿ ತೆಗೆದುಕೊಂಡು ಹೋಗಿದ್ದಾರೆ. ಜನಸ್ಪಂದನ ಕಾರ್ಯಕ್ರಮ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಶಿಕ್ಷಣ, ಕುಡಿಯುವ ನೀರು, ಆರೋಗ್ಯ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸುತ್ತಿದ್ದಾರೆ ಎಂದು ಅಭಿವೃದ್ಧಿ ಕೆಲಸಗಳನ್ನು ತೆರೆದಿಟ್ಟರು.
ತಾಲೂಕು ಪಂಚಾಯಿತಿ ಇಒ ಗಂಗಣ್ಣ, ಬಿಇಒ ಮೋಹನ್ ಕುಮಾರ್, ಜಯಣ್ಣ, ಮಾಡಾಳು ರಂಗನಾಥ್ ಮತ್ತಿತರರು ಹಾಜರಿದ್ದರು.