ಅರಸೀಕೆರೆ ಡಿಪೋ ಎದುರುಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಅಜಯ್, ಗುರುಸಿದ್ದೇಶ್, ಭಾಸ್ಕರ್, ಕುಮಾರ್, ಆನಂದ್ ಇತರರಿದ್ದರು.
ಅರಸೀಕೆರೆ: ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸದೆ ಬಸ್ ನಿಲುಗಡೆಗೆ ತಾಣವನ್ನು ಬದಲಾಯಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಡೆ ಖಂಡಿಸಿ ನೂರಾರು ಜೆಡಿಎಸ್ ಕಾರ್ಯಕರ್ತರು ಬುಧವಾರ ಸಂಜೆ ಡಿಪೋ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದ ನವೀಕರಣ ಹೆಸರಿನಲ್ಲಿ ದಿಢೀರ್ ಮುಚ್ಚಿ ಡಿಪೋ ಹತ್ತಿರ ವರ್ಗಾವಣೆ ಮಾಡಲಾಗಿದೆ. ಕುಡಿಯುವ ನೀರು, ನೆರಳು, ಶೌಚಗೃಹ ಇಲ್ಲದೇ ದೂರದ ಊರುಗಳಿಗೆ ತೆರಳುವ ಸಹಸ್ರಾರು ಪ್ರಯಾಣಿಕರಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ನವೀಕರಣ ಕಾಮಗಾರಿ ವರ್ಷವಿಡೀ ನಡೆಯುವ ಸಾಧ್ಯತೆ ಹೆಚ್ಚಿದೆ. ಇದ್ಯಾವುದನ್ನೂ ಪರಿಗಣಿಸದ ಸ್ಥಳೀಯ ಅಧಿಕಾರಿಗಳು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಣತಿಯಂತೆ ನಡೆದುಕೊಂಡು ಜನರಿಗೆ ತೊಂದರೆ ಕೊಡುತ್ತಿರುವುದು ಅಕ್ಷಮ್ಯ. ಜಿಲ್ಲಾಧಿಕಾರಿಗಳು ತಕ್ಷಣವೇ ಆಗಮಿಸಿ ಪರಿಹಾರ ಸೂಚಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಆಕ್ರೋಶ ಹೊರಹಾಕಿದರು.
ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ನಿಲ್ದಾಣ ಮಾಡಲು ಹೊರಟಿರುವ ಗುತ್ತಿಗೆದಾರರು ಭೂಮಿ ಮನಬಂದಂತೆ ಅಗೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಭೀತಿ ಸೃಷ್ಟಿಸಿದೆ. ಯಾರದ್ದೋ ವಾಹನ, ಇನ್ಯಾರದ್ದೋ ಬೇನಾಮಿ ಗುತ್ತಿಗೆ ಕೆಲಸ ನಡೆಯುತ್ತಿದ್ದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ಒಂದೆಡೆ ನಿಲ್ದಾಣ ಸ್ಥಳಾಂತರ ಆವಾಂತರ ಸೃಷ್ಟಿಸಿದ್ದರೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಗುತ್ತಿಗೆದಾರರು ಜನ ಸಾಮಾನ್ಯರನ್ನು ಹಗುರವಾಗಿ ಕಾಣುತ್ತಿದ್ದು ಸಂಬಂದಿಸಿದ ಉನ್ನತಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಲೋಪ ಸರಿಪಡಿಸಬೇಕು ಎಂದು ಸಂತೋಷ್ ಆಗ್ರಹಿಸಿದರು.
ಸಂಚಾರ ನಿಯಂತ್ರಕ ವಿರೂಪಾಕ್ಷಪ್ಪ ದೌಡಾಯಿಸಿ ಸಮಸ್ಯೆ ಗಂಭೀರತೆಯನ್ನು ಉನ್ನತಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ಬಳಿಕ ಹೋರಾಟ ಕೈಬಿಡಲಾಯಿತು.
ಮುಖಂಡರಾದ ದುಮ್ಮೇನಹಳ್ಳಿ ಅಜಯ್ ಎ.ಬಿ.ಗುರುಸಿದ್ದೇಶ್, ಭಾಸ್ಕರ್, ಕುಮಾರ್, ತೇಜೇಶ್, ಜಯರಾಂ ಮತ್ತಿತರರು ಪಾಲ್ಗೊಂಡಿದ್ದರು.