ಅರಸೀಕೆರೆ ನಗರದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೃಷ್ಣಮೂರ್ತಿ ಬ್ಯಾಗ್ ವಿತರಿಸಿದರು. ರವಿಕುಮಾರ್, ಲಿಂಗರಾಜು ಇತರರಿದ್ದರು. 
ಹಾಸನ

ನೈರ್ಮಲ್ಯ ಕಾಪಾಡುವುದು ಪ್ರತಿ ಪ್ರಜೆಯ ಕರ್ತವ್ಯ

ಅರಸೀಕೆರೆ: ನೈರ್ಮಲ್ಯ ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಯ ಮೊದಲ ಆದ್ಯತೆಯಾಗಬೇಕು ಎಂದು ಪೌರಾಯುಕ್ತ ಕೃಷ್ಣಮೂರ್ತಿ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಮನೆಗಳಲ್ಲಿನ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಕೊಡುವುದರಿಂದ ಸುಲಭವಾಗಿ ಕೊಳೆಯುವಿಕೆ, ವಾಸನೆ ತಡೆಯಬಹುದು. ಅಲ್ಲದೇ ರೋಗ, ರುಜಿನಗಳಿಂದ ದೂರವಿರಬಹುದಾಗಿದೆ. ನಗರ ನೈರ್ಮಲ್ಯ ಕಾಪಾಡುವುದು ಕೇವಲ ಪೌರ ಕಾರ್ಮಿಕರ ಹೊಣೆ ಎಂದು ಭಾವಿಸದೆ ನಗರ ನಿವಾಸಿಗಳು ಸಹಕಾರ ನೀಡಬೇಕು. ಆರೋಗ್ಯಪೂರ್ಣ ನಗರ ನಿರ್ಮಾಣ ನಮ್ಮೆಲ್ಲರ ಹೊಣೆಗಾರಿಕೆ ಎಂದು ಹೇಳಿದರು.
ಎಇಇ ರವಿಕುಮಾರ್ ಮಾತನಾಡಿ, ಕಸ ಸಂಗ್ರಹಣೆಗೆ ಆಟೋ ಟಿಪ್ಪರ್ ವ್ಯವಸ್ಥೆ ಮಾಡಲಾಗಿದೆ. ಹೀಗಿದ್ದರೂ ಕೆಲವೆಡೆ ಮನ ಬಂದಂತೆ ಕಸ ಸುರಿದು ಅನೈರ್ಮಲ್ಯ ಸೃಷ್ಟಿಸಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ನಗರ ನಿವಾಸಿಗಳ ಕ್ಷೇಮಕ್ಕೆ ಪೌರ ಕಾರ್ಮಿಕರು, ನಗರಸಭೆ ಆಡಳಿತ ಶ್ರಮಿಸುತ್ತಿದ್ದು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು.
ಆರೋಗ್ಯ ನಿರೀಕ್ಷಕರಾದ ಲಿಂಗರಾಜು, ರೇವಣ್ಣ, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ನಾಗರಿಕರು ಪಾಲ್ಗೊಂಡಿದ್ದರು.