ಅರಸೀಕೆರೆ ನಗರದ ವಿವೇಕಾನಂದ ಬಿಎಡ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘ, ಸಮಿತಿಗಳ ಚಟುವಟಿಕೆಗೆ ಶ್ರೀಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಶ್ರೀಶಿವಶಂಕರ ಸ್ವಾಮೀಜಿ, ಮಲ್ಲಿಕಾರ್ಜುನ ಬಿ.ಕುಡವಕ್ಕಲಗಿ ಇತರರಿದ್ದರು.
ಅರಸೀಕೆರೆ: ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣವೇ ಬುನಾದಿ ಎಂದು ಯಳನಡು ಮಹಾ ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ವಿವೇಕಾನಂದ ಬಿ.ಎಡ್ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿ ಸಂಘ, ಸಮಿತಿಗಳ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ಸಂಘ ಜೀವಿಯಾಗಿದ್ದು ಉತ್ತಮ ಸಂಸ್ಕೃತಿ, ಸಂಸ್ಕಾರ ಪಡೆಯಲು ಶಿಕ್ಷಣ ಪಡೆಯುವ ಅಗತ್ಯವಿದೆ. ಕಲಿತ ವಿದ್ಯೆಯ ಬಲದಿಂದ ಆದರ್ಶ ಜೀವನ ನಡೆಸಿದರೆ ಮಾತ್ರವೇ ಬದುಕು ಸಾರ್ಥಕತೆ ಪಡೆಯಲಿದೆ. ವಿವೇಕಾನಂದ ಬಿಎಡ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಹಸ್ರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ನಾಡಿನ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ಹೊಸದಾಗಿ ದಾಖಲಾಗಿರುವ ಪ್ರಶಿಕ್ಷಣಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ಸವಲತ್ತಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿ ಎಂದು ಕಿವಿಮಾತು ಹೇಳಿದರು.
ಕಲ್ಮುರುಡೇಶ್ವರ ತಪೋವನದ ಕರಡಿಗವಿ ಮಹಾಸಂಸ್ಥಾನದ ಶ್ರೀಶಿವಶಂಕರ ಶಿವಯೋಗಿ ಸ್ವಾಮೀಜಿ ಮಾತನಾಡಿ, ಕಾಲೇಜಿನಲ್ಲಿ ಕನ್ನಡ, ವಿಜ್ಞಾನ, ಗ್ರಂಥಾಲಯ, ಕ್ರೀಡೆ, ನ್ಯಾಕ್, ಶಿಸ್ತು ಪಾಲನೆ ಸೇರಿದಂತೆ ಹಲವು ಬಗೆಯ ಸಂಘ, ಸಮಿತಿ ರಚಿಸಿರುವುದು ಶ್ಲಾಘನೀಯ. ಆಧುನಿಕ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳವ ಅನಿವಾರ್ಯತೆ ಎಲ್ಲರ ಮುಂದಿದೆ. ಶಿಕ್ಷಣದ ಸಹಾಯದಿಂದ ಪರಿಪಕ್ವ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಬಿ ಕುಡವಕ್ಕಲಗಿ, ಪ್ರಾಧ್ಯಾಪಕ ಪ್ರೊ ಕೆಂಪರಾಜ್ ಮಾತನಾಡಿದರು. ವ್ಯಕ್ತಿತ್ವ ವಿಕಸನ ವೇದಿಕೆ ಸಂಚಾಲಕಿ ಡಾ.ಮಾಲಿನಿ, ಡಾ.ವಿಜಯ ಎಸ್.ಅಗಡಿ, ಡಾ.ಬಸವರಾಜು, ಶೇಖರ್, ಶಶಿಧರ್, ವಿಜಯಕುಮಾರ್, ರೇಖಾ ಮತ್ತಿತರರು ಹಾಜರಿದ್ದರು.