ಇಂದು ಉದ್ಘಾಟನೆಯಾಗುತ್ತಿರುವ ನೂತನ ದೇಗುಲ.
ಅರಸೀಕೆರೆ ಗ್ರಾಮಾಂತರ: ಅರಸೀಕೆರೆ ತಾಲೂಕಿನ ಕಣಕಟ್ಟೆ ಗ್ರಾಮದ ಪಂಚಲಿಂಗಗಳಲ್ಲಿ ಒಂದಾದ ಶ್ರೀಕಮಟೇಶ್ವರಸ್ವಾಮಿ ದೇವರ ಮರು ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಭಾನುವಾರ ಉದ್ಘಾಟನೆಯಾಗಲಿದೆ.
ಭಾನುವಾರ ಬೆಳಗ್ಗೆ ಮಂಡಲ ರಚನೆ, ರಕ್ಷೋಜ್ಞ ಹೋಮ ಅಂಕುರಾರ್ಪಣ, ಬಿಂಬ ಶುದ್ಧಿ, ಜಲಾದಿವಾಸ, ಕ್ಷೀರ ಪುಷ್ಪ ದಿವಸ, ರತ್ನ ದಿವಸ, ಪೂರ್ಣಾವತಿ ಮಹಾ ಮಂಗಳಾರತಿ, ಪಂಚಗವ್ಯ ಪ್ರಾಯಶ್ಚಿತ್ತ ಹೋಮ, ಮಹಾ ಗಣಪತಿ ಹೋಮ, ನವಗ್ರಹ ಹೋಮ, ಧಾನ್ಯಾದಿವಾಸ, ವಸ್ತ್ರಾದಿವಾಸ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಹರಿಹರಪುರದ ಶ್ರೀಆದಿ ಶಂಕರಾಚಾರ್ಯ ಶ್ರೀಶಾರದಾ ಲಕ್ಷ್ಮೀ ನೃಸಿಂಹ ಪೀಠಾಧೀಶ್ವರರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಯ ಘನ ಉಪಸ್ಥಿತಿಯಲ್ಲಿ ಮಧ್ಯಾಹ್ನ ಕುಂಭಾಭಿಷೇಕ ಹಾಗೂ ಧಾರ್ಮಿಕ ಸಭೆ ಜರುಗಲಿದೆ.
ಸುಕ್ಷೇತ್ರ ಬೆಲಗೂರು ಶ್ರೀವಿಜಯ ಮಾರುತಿ ಶರ್ಮ ಸ್ವಾಮೀಜಿ, ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಧರ್ಮಸ್ಥಳ ಟ್ರಸ್ಟ್ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್, ಪುರಾತತ್ವ ಸಂಗ್ರಹಾಲಯಗಳ ಇಲಾಖೆ ಆಯುಕ್ತ ದೇವರಾಜ್, ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್, ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀಕಮಟೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.