ಅರಕಲಗೂಡು ತಾಲೂಕಿನ ರಾಮನಾಥಪುರದ ಶ್ರೀಉತ್ತರಾಧಿ ಮಠದಲ್ಲಿ ಶ್ರೀರಾಘವೇಂದ್ರಸ್ಬಾಮಿ ವರ್ಧಂತಿ ಮಹೋತ್ಸವ ಅಂಗವಾಗಿ ಮಂಗಳವಾರ ನಡೆದ ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಅರಕಲಗೂಡು: ತಾಲೂಕಿನ ರಾಮನಾಥಪುರದ ಶ್ರೀಉತ್ತರಾದಿ ಮಠದಲ್ಲಿ ಶ್ರೀರಾಘವೇಂದ್ರಸ್ವಾಮಿ ವರ್ಧಂತಿ ಮಹೋತ್ಸವ ಅಂಗವಾಗಿ ಮಂಗಳವಾರ ದೇವರ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ರಥೋತ್ಸವದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರ ದೇವರ ಕೃಪೆಗೆ ಪಾತ್ರರಾದರು. ರಥೋತ್ಸವದ ಅಂಗವಾಗಿ ದೇಗುಲವನ್ನು ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಶ್ರೀಉತ್ತರಾದಿ ಮಠದ ದೇಗುಲದ ಮುಂಭಾಗದಲ್ಲಿ ನಿಲ್ಲಿಸಿ ವಿವಿಧ ಪುಷ್ಪಗಳಿಂದ ಹಾಗೂ ಬಗ್ಗೆ ಬಗೆಯ ವರ್ಣದ ಬಟ್ಟೆಗಳಿಂದ ಅಲಂಕರಿಸಿದ 25 ಅಡಿ ಎತ್ತರದ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ನೆರೆದಿದ್ದ ಭಕ್ತರು ಮಂಗಳ ವಾದ್ಯಗಳೊಂದಿಗೆ ಸಾಮೂಹಿಕವಾಗಿ ರಥವನ್ನು ಎಳೆಯುತ್ತಾ ದೇವಸ್ಥಾನದ ಮುಂಭಾಗದಿಂದ ರಥದ ಬೀದಿಯಲ್ಲಿ ತೆರಳಿ ಕಾವೇರಿ ನದಿ ಸೇತುವೆಯವರೆಗೂ ಹಾಗೂ ಮತ್ತೆ ಇಲ್ಲಿಯ ಶ್ರೀಸುಬ್ರಹ್ಮಣ್ಯಸ್ಬಾಮಿ ದೇವಾಲಯದ ಸುತ್ತ ಪ್ರದಕ್ಷಿಣೆ ನಂತರ ಸ್ವಸ್ಥಾನಕ್ಕೆ ರಥವನ್ನು ಎಳೆದು ತಂದು ನಿಲ್ಲಿಸಿದರು.
ಶ್ರೀಮಠದ ಅವರಣದಲ್ಲಿ ಶ್ರೀಗುರುರಾಯರ ಅಷ್ಟಕ್ಷರ ಹೋಮ ಹವನಾದಿಗಳು ಸೇರಿದಂತೆ ವಿವಿಧ ಪೂಜೆ, ಧಾರ್ಮಿಕ ಸೇವಾ ಕಾರ್ಯಗಳು ಜರುಗಿದವು.
ಶ್ರೀಸ್ವಾಮಿಯವರ ಬೃಂದಾವನಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು ಶ್ರೀರಾಘವೇಂದ್ರಸ್ವಾಮಿಗಳ ಪಟ್ಟಾಭಿಷೇಕ ಹಾಗೂ ಮಹಾ ರಥೋತ್ಸವ ಮತ್ತು ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.