ಯುವ ವಿಜ್ಞಾನಿ ಡಾ.ಕೋಮಲ್ ಕುಮಾರ್
ಅರಕಲಗೂಡು: ರಕ್ತದ ಕ್ಯಾನ್ಸರ್‌ಗೆ ನವೀನ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಮನಾರ್ಹ ಸಂಶೋಧನೆ ನಡೆಸಿ ಮಹತ್ವದ ಕೊಡುಗೆ ನೀಡಿರುವ ಅರಕಲಗೂಡಿನ ಯುವ ವಿಜ್ಞಾನಿ ಡಾ.ಕೋಮಲ್ ಕುಮಾರ್ ಅವರಿಗೆ ಪ್ರತಿಷ್ಠಿತ ‘ರಾಷ್ಟ್ರೀಯ ರತ್ನ’ ಪ್ರಶಸ್ತಿ ಲಭಿಸಿದೆ.
ಪ್ರಸ್ತುತ ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಟ್ರಾನ್ಸ್‌ಲೇಷನಲ್ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಕೋಮಲ್ ಕುಮಾರ್, ರಕ್ತದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಸಂಶೋಧನಾ ಕಾರ್ಯದ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಡಾ.ಕುಮಾರ್ ಅವರು ಡೆನ್ಮಾರ್ಕ್‌ನ ರಿಗ್ಸ್ ಹಾಸ್ಪಿಟಲೆಟ್, ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ವಿಶ್ವವಿದ್ಯಾಲಯ ಹಾಗೂ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ ಸೇರಿದಂತೆ ವಿಶ್ವದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಅಮೂಲ್ಯ ಅನುಭವ ಗಳಿಸಿದ್ದಾರೆ.
ಅವರ ಸಂಶೋಧನಾ ಫಲಿತಾಂಶಗಳು ಜಾಗತಿಕ ಮಟ್ಟದ ಪ್ರತಿಷ್ಠಿತ ಸಹ-ಪರಿಶೀಲಿತ ವೈಜ್ಞಾನಿಕ ಜರ್ನಲ್‌ಗಳಲ್ಲಿ ಪ್ರಕಟಗೊಂಡಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿವೆ.
ವೈದ್ಯಕೀಯ ಸಂಶೋಧನೆಯಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನವು ಈ ವರ್ಷದ ‘ರಾಷ್ಟ್ರೀಯ ರತ್ನ’ ಪ್ರಶಸ್ತಿಗೆ ಡಾ.ಕೋಮಲ್ ಕುಮಾರ್ ಅವರನ್ನು ಆಯ್ಕೆ ಮಾಡಿದೆ. ಶೀಘ್ರದಲ್ಲೇ ನಡೆಯಲಿರುವ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಶೀಲಮ್ಮ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.