ಅರಕಲಗೂಡು ತಾಲೂಕಿನ ಮಗ್ಗೆ ಮನೆತನದ ಹಸಿರು ಪ್ಲಾಂಟೇಷನ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೃಹತ್ ಕೃಷಿಮೇಳದಲ್ಲಿ ಪ್ರಗತಿಪರ ಕೃಷಿಕ ಡಾ.ಎಂ.ಸಿ.ರಂಗಸ್ವಾಮಿ ಅವರನ್ನು ವಿವಿಧ ಕೃಷಿಕ ಸಮಾಜದ ಮುಖಂಡರು ಸನ್ಮಾನಿಸಿದರು. ಕೆ.ಸಿ.ಸೌಮ್ಯಾ, ರಾಮೇಗೌಡ, ದಿನೇಶ್, ಗಂಗಾಧರ್ ಇತರರಿದ್ದರು.
ಅರಕಲಗೂಡು: ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಯುವಕರು ಶ್ರಮ ವಹಿಸಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು ನೀಡುವ ಮೂಲಕ ವೈಜ್ಞಾನಿಕವಾಗಿ ಸಮಗ್ರ ಬೆಳೆಗಳನ್ನು ಬೆಳೆದರೆ ಆರ್ಥಿಕವಾಗಿ ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿಕೊಳ್ಳಬಹುದು ಎಂದು ಪ್ರಗತಿಪರ ಕೃಷಿಕ ಹಾಗೂ ಹಾಸನ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಾ.ಎಂ.ಸಿ.ರಂಗಸ್ವಾಮಿ ಸಲಹೆ ನೀಡಿದರು.
ತಾಲೂಕಿನ ಮಗ್ಗೆ ಮನೆತನದ ಹಸಿರು ಪ್ಲಾಂಟೇಷನ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೃಹತ್ ಕೃಷಿಮೇಳ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ವಿದ್ಯೆ ಕಲಿತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಅವಿರತ ದುಡಿಯುವ ಬದಲು ಕೃಷಿಯಲ್ಲೇ ವೃತ್ತಿ ಬದುಕು ಕಂಡುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ಹೈನುಗಾರಿಕೆ ಲಾಭದಾಯಕ ಉದ್ಯಮ ಎಂಬುದನ್ನರಿತು ಕೆಲವರು ಬೇಸಾಯಕ್ಕೆ ಮರಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸಮಗ್ರ ಕೃಷಿ ಪದ್ಧತಿಯೊಂದಿಗೆ ಹೈನುಗಾರಿಕೆಯಲ್ಲಿ ಉನ್ನತಿ ಸಾಧಿಸಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ವಿಸ್ತರಿಸಿಕೊಳ್ಳಬೇಕು. ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸಿಕೊಳ್ಳುವುದು ಸೂಕ್ತ ಎಂದರು.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರ ಪ್ರದೇಶಗಳಲ್ಲಿ ನಡೆಯುವಂತಹ ಬೃಹತ್ ಕೃಷಿಮೇಳವನ್ನು ಹಸಿರು ಅರ್ಗ್ಯಾನಿಕ್ ಸಂಸ್ಥೆ ಸಹಯೋಗದಲ್ಲಿ ಹಳ್ಳಿಯಲ್ಲಿ ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಎರಡು ಸಾವಿರ ಕೃಷಿಕರು ಹಾಗೂ ವಿವಿಧ ಕೃಷಿ ಸಂಬಂಧಿತ ಮಳಿಗೆಗಳನ್ನು ಸ್ಥಾಪಿಸಿ ಎಐ ಆಧಾರಿತ ಹಾಗೂ ಮಾರುಕಟ್ಟೆ ಸಹಿತ ಸಮಗ್ರ ಮಾಹಿತಿ ಒದಗಿಸಲಾಗಿದೆ ಎಂದು ಹೇಳಿದರು.
ಮೂಡಿಗೆರೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಜಿ.ದಿನೇಶ್ ಮಾತನಾಡಿ, ಭಾರತೀಯ ಕಾಫಿ ಬೆಳೆಗಾರರು ಉತ್ತಮ ಬೆಳೆ ಬೆಳೆಯುತ್ತಿದ್ದರೂ ಹಂತ ಹಂತವಾಗಿ ಕಾಫಿ ಗುಣಮಟ್ಟ ಕಾಪಾಡಿ ಉತ್ಕೃಷ್ಟತೆ ಹೆಚ್ಚಿಸಿಕೊಳ್ಳಬೇಕು. ಹವಾಮಾನ ಆಧಾರಿತ ಬೆಳೆ ಹಾಗೂ ಕಾಫಿ ತೋಟಗಳ ನಿರ್ವಹಣೆ ಮುಖ್ಯ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ವೃದ್ಧಿಸಿ ಲಾಭ ಸಿಗಲಿದೆ. ಕೃಷಿಯಲ್ಲಿ ಹೊಸತನ ಕಂಡುಕೊಳ್ಳಬೇಕು. ಮಗ್ಗೆ ಮನೆತನದ ಸಹೋದರರ ಅವಿಭಕ್ತ ಕುಟುಂಬದ ಪ್ರಾಮಾಣಿಕ ಪರಿಶ್ರಮದಿಂದ ಕೃಷಿ ಇಲ್ಲಿ ದೇವಾಲಯದಂತಿದ್ದು ಸಂಶೋಧನಾ ಕೇಂದ್ರವಾಗಿ ಬದಲಾವಣೆ ಕಂಡಿದೆ ಎಂದರು.
ಕಾಫಿ ಅಸೋಷಿಯೇಷನ್ ಸಂಘದ ಸುಹಾಸ್ ಮಾತನಾಡಿ, ಕಾಫಿಯಲ್ಲಿ ವಿಶೇಷತೆ ಉಳಿಸಿಕೊಳ್ಳಬೇಕು. ಶೆಡ್‌ನಲ್ಲಿ ಇಲ್ಲವೇ ನೆಲದಿಂದ ಮೂರಡಿ ಎತ್ತರದಲ್ಲಿ ಕಾಫಿ ಹಣ್ಣು ಒಣಗಿಸಬೇಕು. ಪ್ರತಿ ಹಂತದಲ್ಲೂ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕಾದರೆ ಹಲವು ರೀತಿಯಲ್ಲಿ ಉಪಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಹೈನುಗಾರಿಕೆ ಉದ್ಯಮಿ ಶಿರಿನ್ ರಂಗಸ್ವಾಮಿ ಮಾತನಾಡಿ, ಕೃಷಿ ಜತೆಗೆ ಹಸುಗಳ ಸಾಕಣೆ ಮಾಡಿ ರೈತರು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕಾಗಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಂಡುಕೊಂಡರೆ ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಭಾರತೀಯ ತೋಟಗಾರಿಕೆ ಇಲಾಖೆ ನಿವೃತ್ತ ವಿಜ್ಞಾನಿ ನಾರಾಯಣಸ್ವಾಮಿ ಮಾತನಾಡಿ, ಸಣ್ಣ ರೈತರಿಗೂ ತಂತ್ರಜ್ಞಾನ ಸೌಲಭ್ಯ ತಲುಪಿಸಿದರೆ ಕಡಿಮೆ ಜಮೀನಿನಲ್ಲಿ ಲಾಭಾಂಶ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ ಮಾತನಾಡಿ, ರೈತರು ಆರ್ಥಿಕವಾಗಿ ಬೆಳವಣಿಗೆ ಹೊಂದುವ ಮೂಲಕ ಆರೋಗ್ಯಕರ ಜೀವನ ಸಾಗಿಸಬೇಕಾಗಿದೆ. ನಿರಂತರವಾಗಿ ಆದಾಯಕ್ಕಾಗಿ ಪರಿಶುದ್ಧ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉತ್ಪಾದಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಮೇಳದಲ್ಲಿ ಉತ್ತಮ ಮಾಹಿತಿ ನೀಡಲಾಗಿದೆ ಎಂದರು.
ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮಾತನಾಡಿ, ಆಧುನಿಕತೆಗೆ ತಕ್ಕಂತೆ ರೈತರು ಆರ್ಥಿಕವಾಗಿ ಉನ್ನತಿ ಸಾಧಿಸಬೇಕಾದರೆ ಇಂತಹ ಮೇಳಗಳಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರೊ.ಮಾಯಣ್ಣ ಮಾತನಾಡಿ, ಶ್ರಮಜೀವಿಗಳ ಪರಿಶ್ರಮದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ. ಸಮಗ್ರ ಕೃಷಿ ಮತ್ತು ಹೈನುಗಾರಿಕೆಯಲ್ಲಿ ನಿಷ್ಠೆಯಿಂದ ದೊಡ್ಡಮಟ್ಟದ ಸಾಧನೆ ಮಾಡಿರುವ ಮಗ್ಗೆ ಮನೆತನದ ಕುಂಟುಂಬದ ಕೊಡುಗೆ ಅಪಾರವಾಗಿದೆ. ಕೃಷಿಯಲ್ಲಿ ಅಷ್ಟೇ ಅಲ್ಲದೆ ಉತ್ಸಾಹಿ ಕೃಷಿಕ ಎಂ.ಟಿ. ಕೃಷ್ಣೇಗೌಡ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲದೆ ಪಕ್ಷೇತರವಾಗಿ ಸ್ಪರ್ಧಿಸಿ ಹೆಚ್ಚು ಮತಗಳನ್ನು ಪಡೆದು ರಾಜ್ಯ ರಾಜಕೀಯದಲ್ಲಿ ಬೆರುಗು ಮೂಡಿಸಿದ್ದಾರೆ. ದೇವರು ಕಲ್ಲಾಗಿರದಿದ್ದರೆ ಮುಂದಿನ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯಲ್ಲಿ ಅವರನ್ನು ಕಾಣುವಂತಾಗಲಿ ಎಂದು ಆಶಿಸಿದರು.
ಕಾಫಿ ಮಂಡಳಿಯ ಅಶೋಕ್ ಕುಮಾರ್, ಕಿರಣ್, ವೇಣುಗೋಪಾಲ್, ಕೃಷಿಕ ಸಮಾಜದ ಗಂಗಾಧರ್, ಅಶ್ವಥ್ ಕುಮಾರೇಗೌಡ, ಮಲ್ಲೇಶ್, ಚಂದ್ರು, ಎಚ್.ಮಂಜುನಾಥ್ ಇತರರಿದ್ದರು. ಎಐ ಆಧಾರಿತ ಹಾಗೂ ವಿವಿಧ ಕೃಷಿ ಸಂಬಂಧಿತ ವಸ್ತು ಪ್ರದರ್ಶನ ಮಳಿಗೆಗಳು ಗಮನ ಸೆಳೆದವು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಕೃಷಿಕರು ಜೀವಾಮೃತ, ಇಸ್ರೇಲ್ ಮಾದರಿ ಹೈನುಗಾರಿಕೆ, ಸಮಗ್ರ ಹಸಿರು ಕೃಷಿ ಪ್ಲಾಂಟೇಷನ್ ವೀಕ್ಷಿಸಿ ಮಾಹಿತಿ ಪಡೆದರು.