ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿದರು. ಬಸವರಾಜು ಸಿಗ್ಗಾವಿ, ಉಷಾ ಸತೀಶ್ ಇದ್ದರು.
ಬೇಲೂರು: ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ಪುರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಪ್ರಮುಖ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಲಾಯಿತು.
ಎಸ್‌ಎಫ್‌ಸಿ ಮುಕ್ತನಿಧಿ ಹಾಗೂ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವು ಯೋಜನೆಗಳ ಸಂಬಂಧ ಚರ್ಚಿಸಲಾಯಿತು. ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 26.88 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಹೊಂಡಕ್ಕೆ ಎಚ್‌ಡಿಪಿಇ ಲೈನರ್ ಅಳವಡಿಕೆ, ವಾರ್ಡ್ 4ರ ಅಂತರ ಘಟ್ಟಮ್ಮ ದೇಗುಲ ರಸ್ತೆ ಅಭಿವೃದ್ಧಿಗೆ 24.94 ಲಕ್ಷ ರೂ., ನೀರು ಶುದ್ಧೀಕರಣ ಘಟಕಕ್ಕೆ 120 ಎಚ್‌ಪಿ ಮೋಟಾರ್ ಮತ್ತು ಸ್ಟಾರ್ಟರ್ ಬೋರ್ಡ್ ಅಳವಡಿಕೆಗೆ 16 ಲಕ್ಷ ರೂ.ವೆಚ್ಚದ ಕಾಮಗಾರಿಗಳಿಗೆ ಸಭೆಯಲ್ಲಿ ಸದಸ್ಯರು ಒಪ್ಪಿಗೆ ಸೂಚಿಸಿದರು.
ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ಕುಡಿಯುವ ನೀರು ಸಂಗ್ರಹದ ಜಾಕ್‌ವೆಲ್‌ಗೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. ವಾರ್ಡ್‌ಗಳಲ್ಲಿ ನೀರು ಪೂರೈಕೆ ಸಮಸ್ಯೆಗಳಿದ್ದರೆ ಸದಸ್ಯರು ಗಮನಕ್ಕೆ ತರಬೇಕೆಂದು ಮನವಿ ಮಾಡಿದರು. ಪಟ್ಟಣದ ಜನಸಂಖ್ಯೆಗೆ ಪ್ರತಿದಿನ ಸುಮಾರು 30 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದ್ದು, ಪ್ರಸ್ತುತ ಕೇವಲ 9 ಲಕ್ಷ ಲೀಟರ್ ಸಾಮರ್ಥ್ಯ ಮಾತ್ರ ಲಭ್ಯವಿರುವುದರಿಂದ ಸಮಸ್ಯೆ ಉಂಟಾಗಿದೆ. ಆದ್ದರಿಂದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಸೂಕ್ತ ಸ್ಥಳದ ಕೊರತೆಯೂ ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿಗೆ ಹೊಸ ಬೀದಿ ದೀಪಗಳನ್ನು ಅಳವಡಿಸಲಾಗುವುದು. ವಿಶೇಷ ಸಭೆಯಲ್ಲಿ ಹಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದ ನಿಮಗೆ ಧನ್ಯವಾದಗಳು. ಎಸ್‌ಎಫ್‌ಸಿ ಮುಕ್ತನಿಧಿಯ 6 ಲಕ್ಷ ರೂ.ಹಾಗೂ 15ನೇ ಹಣಕಾಸು ಆಯೋಗದ ಘನತ್ಯಾಜ್ಯ ನಿರ್ವಹಣೆಯ 1.57 ಕೋಟಿ ರೂ.ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸದಸ್ಯರ ಸಹಕಾರದೊಂದಿಗೆ ವೇಗವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಪುರಸಭೆ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಘನತ್ಯಾಜ್ಯ ಘಟಕಕ್ಕೆ ಖರೀದಿಸಲಾಗುತ್ತಿರುವ ಯಂತ್ರೋಪಕರಣಗಳು ಹಾಗೂ ಖರೀದಿ ಪ್ರಕ್ರಿಯೆಗಳ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಬೇಕು. ಅಲ್ಲದೆ, ವಾರ್ಡ್‌ನಲ್ಲಿ ಕಾಮಗಾರಿಗೆಂದು ಟೆಂಡರ್ ಕರೆದು ಮೂರು ತಿಂಗಳು ಕಳೆದರೂ ಕೆಲಸಗಳು ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಟೆಂಡರ್ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಕಾಮಗಾರಿಗಳನ್ನು ಆರಂಭಿಸಬೇಕು. ಪುರಸಭೆಯಲ್ಲಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಚುರುಕು ಮುಟ್ಟಿಸಿದರೆ ಮಾತ್ರ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ಸಾಗುತ್ತವೆ. ಇದಕ್ಕೆ ಅಧ್ಯಕ್ಷರು ಮುಂದಾಗಬೇಕು ಎಂದು ಹೇಳಿದರು.
ಸದಸ್ಯ ಜಮಾಲುದ್ದೀನ್ ಮಾತನಾಡಿ, ಅನುಮೋದನೆಗೊಂಡಿರುವ ಕಾಮಗಾರಿಗಳನ್ನು ವಿಳಂಬ ಮಾಡದೆ ಶೀಘ್ರ ಜಾರಿಗೆ ತರಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದಲ್ಲಿ ಜನರು ನಮ್ಮನ್ನು ಬೈದುಕೊಂಡು ಓಡಾಡುವಂತಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು. ಪಟ್ಟಣದಲ್ಲಿ ಎರಡು-ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. 23 ವಾರ್ಡ್‌ಗಳಿಗೆ ಕಸ ಸಂಗ್ರಹಿಸಲು ನಿಯೋಜಿಸಿರುವ ಟಿಪ್ಪರ್ ವಾಹನ ಪ್ರತಿದಿನ ಬಾರದ ಕಾರಣ ರಸ್ತೆ ಬದಿಯಲ್ಲಿ ಕಸ ಹಾಕಲಾಗುತ್ತಿದೆ. ಚರಂಡಿಗಳಲ್ಲಿರುವ ಕಸ ತೆರವು ಸಮರ್ಪಕವಾಗಿ ನಡೆಯುತ್ತಿಲ್ಲ. ನೀರು ಸರಬರಾಜಿನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ ಸಮರ್ಪಕ ನೀರು ಪೂರೈಕೆ ಮಾಡಬೇಕು. ಕುಡಿಯುವ ನೀರು ಪೂರೈಕೆ ಹಾಗೂ ಕಸ ಸಂಗ್ರಹಣೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ತಕ್ಷಣ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಉಪಾಧ್ಯಕ್ಷೆ ಉಷಾ ಸತೀಶ್ ಮಾತನಾಡಿ, ಕಳೆದ ನಾಲ್ಕು ತಿಂಗಳಲ್ಲಿ ಸದಸ್ಯರ ಸಹಕಾರದಿಂದ ಹಲವು ಉತ್ತಮ ಕೆಲಸಗಳು ನಡೆದಿವೆ. ಆದರೆ, ವಾರ್ಡ್‌ಗಳಿಗೆ ಭೇಟಿ ನೀಡುವ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಧ್ಯವಾಗಿಲ್ಲ. ಇನ್ನಾದರೂ ಅಧ್ಯಕ್ಷರು ಸದಸ್ಯರು, ಅಧಿಕಾರಿಗಳೊಂದಿಗೆ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಿ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸದಸ್ಯ ಜಗದೀಶ್ ಮಾತನಾಡಿ, ಮಾಜಿ ಅಧ್ಯಕ್ಷ ಎ.ಆರ್.ಅಶೋಕ್ ಉತ್ತಮ ಕೆಲಸ ಮಾಡಿದ್ದಾರೆ. ಅಧಿಕಾರಿಗಳು ಮತ್ತು ನೌಕರರೊಂದಿಗೆ ನೂತನ ಅಧ್ಯಕ್ಷರು ಸಮನ್ವಯ ಸಾಧಿಸಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸದಸ್ಯ ಶೈಲೇಶ್ ಮಾತನಾಡಿ, ಚನ್ನಕೇಶವಸ್ವಾಮಿ ಜಾತ್ರೆ ವೇಳೆ ತೆಗೆದುಕೊಂಡು ಹೋಗಿದ್ದ 20 ಬೀದಿ ದೀಪಗಳ ಬಗ್ಗೆ ಗುತ್ತಿಗೆದಾರರಿಂದ ಮಾಹಿತಿ ಪಡೆಯಬೇಕು. ಎಲ್ಲಿಗೆ ಅವಶ್ಯಕತೆ ಇದೆಯೋ ಅಲ್ಲಿ ಅಳವಡಿಸಲು ಮುಂದಾಗಬೇಕು ಎಂದರು.
ಸೌಮ್ಯಾ ಸುಬ್ರಹ್ಮಣ್ಯ ಮಾತನಾಡಿ, ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು. ಇದಕ್ಕೆ ಸದಸ್ಯರಾದ ತೀರ್ಥಕುಮಾರಿ ವೆಂಕಟೇಶ್, ರತ್ನಾ ಸತ್ಯನಾರಾಯಣ ಹಾಗೂ ಉಪಾಧ್ಯಕ್ಷೆ ಉಷಾ ಸತೀಶ್ ದನಿಗೂಡಿಸಿದರು. ಸಭೆಯಲ್ಲಿ ಮುಖ್ಯಾಧಿಕಾರಿ ಬಸವರಾಜು ಸಿಗ್ಗಾವಿ ಇದ್ದರು.