ಹೊಳೆನರಸೀಪುರ ಪಟ್ಟಣದಲ್ಲಿ ಭಾರತೀಯ ಕಿಸಾನ್ ಸಂಘ ತಾಲೂಕು ಘಟಕ ರೈತರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಗಿರೀಶ್ ಕೃಷ್ಣಕುಮಾರ್, ಶ್ರೀನಿವಾಸ್, ಮೋಹನ್ ನಾಗೇಂದ್ರ ಇದ್ದರು. 
ಹಾಸನ

ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಗ್ರಹ
  • ಸರ್ಕಾರದ ವಿರುದ್ಧ ಪ್ರತಿಭಟನೆ
ಹೊಳೆನರಸೀಪುರ: ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ತುರ್ತಾಗಿ ಘೋಷಿಸುವ ಮೂಲಕ ನೆರವಿಗೆ ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘ ತಾಲೂಕು ಘಟಕ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರೈತರು ಬೆಳೆಯುವಂತಹ ರಾಗಿ, ಮೆಕ್ಕೆಜೋಳ ಹಾಗೂ ಇತರ ಬೆಳೆಗಳಿಗೆ ನ್ಯಾಯಯುತವಾದ ಬೆಂಬಲ ಬೆಲೆ ಘೋಷಿಸಬೇಕು. ರೈತರಿಗೆ ನಷ್ಟದ ರೂಪದಲ್ಲಿ ನೀಡುವಂತಹ ಪರಿಹಾರದ ಹಣವನ್ನು ಕೂಡಲೇ ಜಮೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುವುದನ್ನು ಬಿಟ್ಟು ರೈತರ ಸಮಸ್ಯೆಗಳನ್ನು ಆಲಿಸಿ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡುವಲ್ಲಿ ಗಮನಹರಿಸಲಿ ಎಂದು ಹೇಳಿದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಕೆ.ಶ್ರೀನಿವಾಸ್ ಮಾತನಾಡಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅಧಿಕಾರಕ್ಕಾಗಿ ಗುದ್ದಾಟ ನಡೆಸುತ್ತಿದ್ದಾರೆ. ಸರ್ಕಾರದ ಆಡಳಿತ ಹಳಿತಪ್ಪಿ ಅಭಿವೃದ್ಧಿ ಕೆಲಸಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಧಿಕಾರಕ್ಕಾಗಿ ಕಿತ್ತಾಡುವುದನ್ನು ಬಿಟ್ಟು ಜನರ ಸಮಸ್ಯೆಗಳತ್ತ ಗಮನಹರಿಸಲಿ ಎಂದು ಹೇಳಿದರು.
ಪ್ರತಿಭಟನಾಕಾರರು ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂಭಾಗ ಸಮಾವೇಶಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಅಂಕವಳ್ಳಿ ಮೋಹನ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಕೃಷ್ಣಕುಮಾರ್, ಕಾರ್ಯದರ್ಶಿ ರವಿ ಹಾಗೂ ವಿದ್ಯಾ ಪ್ರಸಾದ್, ನಾಗರತ್ನಮ್ಮ, ಇಂದಿರಾ ನಾಗರಾಜ್ ಗಾಯಿತ್ರಿ, ಗೌರಮ್ಮ ದೀಪಕ್, ನಾಗೇಂದ್ರ ಕೀರ್ತನ್ ಇತರರು ಭಾಗವಹಿಸಿದ್ದರು.