ಚನ್ನರಾಯಪಟ್ಟಣ ತಾಲೂಕು ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ನಡೆದ 22ನೇ ವರ್ಷದ ಮಹಾಚಂಡಿಕಯಾಗ ಧಾರ್ಮಿ ಕಾರ್ಯಕ್ರಮದಲ್ಲಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಪೂರ್ಣಾಹುತಿ ನೆರವೇರಿಸಿದರು. ಶ್ರೀ ಚಂದ್ರಶೇಖರ ಗುರೂಜಿ, ಅಮೋಘ ನಂಜಪ್ಪ, ಉಮಾಶಂಕರ್, ತಿಮ್ಮಪ್ಪ ಇದ್ದರು. 
ಹಾಸನ

ಮನುಷ್ಯನಿಗೆ ಕೋಪವೇ ಬಹುದೊಡ್ಡ ಶತ್ರು

ನಾಗೇಶ ಎಸ್
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ 22ನೇ ವರ್ಷದ ಮಹಾ ಚಂಡಿಕ ಯಾಗ ಸೋಮವಾರ ನಡೆಯಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಾಗಣಪತಿ ಹೋಮ, ಪುಣ್ಯಾಹವಾಚನ, ಅಂಕುರಾರ್ಪಣೆ, ದುರ್ಗಾಸಪ್ತಶತಿ ಪಾರಾಯಣ ಹಾಗೂ ಮಹಾಮಂಗಳಾರತಿ ನೆರವೇರಿತು. ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮಹಾಚಂಡಿಕಾಯಾಗ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮಧ್ಯಾಹ್ನ 12ಕ್ಕೆ ಮಹಾಪೂರ್ಣಾಹುತಿ ಮತ್ತು ಮಹಾ ಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು. ನಂತರ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು, ಕೋಪದಿಂದ ಕುಟುಂಬದಲ್ಲಿ ಸಾಮರಸ್ಯ, ನೆಮ್ಮದಿ ಹಾಳಾಗುತ್ತದೆ. ಮನುಷ್ಯನಿಗೆ ಕೋಪ ಬಹುದೊಡ್ಡ ಶತ್ರು. 84 ಲಕ್ಷ ಜೀವರಾಶಿಗಳಿಗೂ ಆತ್ಮವಿರುತ್ತದೆ. ಅದರ ಅಂತಿಮ ರೂಪವೇ ಮಾನವ ಜನ್ಮವಾಗಿದೆ. ತತ್ವಾಚರಣೆ ಹಾಗೂ ಮಾನವೀಯತೆಗಳು ನಮ್ಮನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ಯುತ್ತವೆ. ಆದ್ದರಿಂದಲೇ ಇದನ್ನು ಸಾರ್ಥಕವಾಗಿ ಕಳೆಯಬೇಕು ಎಂದರು.
ಸಮಾಜದಲ್ಲಿ ನಮ್ಮ ದೃಷ್ಟಿಕೋನ ಸಕಾರಾತ್ಮಕವಾಗಿರಬೇಕು, ಮನಸು ಪರಿಶುದ್ಧವಾಗಿರಬೇಕು. ಚಂಚಲ ಮನಸು ನಮ್ಮದಾಗಬಾರದು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಉತ್ತಮ ಪ್ರಜೆಗಳಾಗಿ ಬದುಕಬೇಕು. ಬದುಕಿನ ಸಂಧ್ಯಾಕಾಲದಲ್ಲಿ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕುಟುಂಬದಲ್ಲಿ ಪರಸ್ಪರ ನಂಬಿಕೆ ಮತ್ತು ಗೌರವ ಇರಬೇಕು. ಜಪ ತಪ, ಹೋಮಗಳಿಂದ ಮನುಷ್ಯನ ಮನಸ್ಸಿನ ಮಲಿನತೆ ಮುಕ್ತವಾಗಲಿದೆ. ಹೋಮ ಹವನದಿಂದ ಪ್ರಸನ್ನನಾಗುವ ಭಗವಂತ ಲೋಕವನ್ನು ಉದ್ಧರಿಸುತ್ತಾನೆ. ಹಾಗಾಗಿ ಯಜ್ಞ ಯಾಗಾದಿಗಳಿಗೆ ಅದರದೆ ಆದ ಮಹತ್ವವಿದೆ. ಪ್ರತಿ ವರ್ಷ ಲೋಕ ಕಲ್ಯಾರ್ಣಥವಾಗಿ ಕ್ಷೇತ್ರದ ಶ್ರೀ ಚಂದ್ರಶೇಖರ ಗುರೂಜಿ ಯಜ್ಞ ಕೈಗೊಳ್ಳುತ್ತಿರುವ ತಾಲೂಕಿಗೆ ಒಳಿತಾಗಲಿದೆ ಎಂದು ಹೇಳಿದರು.
ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀಚಂದ್ರಶೇಖರ ಗುರೂಜಿ ಮಾತನಾಡಿ, ಈ ಕೇಂದ್ರದಲ್ಲಿ ಕಳೆದ 22 ವರ್ಷಗಳಿಂದ ಅನ್ನ ದಾಸೋಹ, ಆರೋಗ್ಯ ಮತ್ತು ಅಕ್ಷರಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಾಧನೆಯ ಹಾದಿಯಲ್ಲಿ ಆತುರದ ನಿರ್ಧಾರಗಳು ಬೇಡ, ಹಣದ ಹಿಂದೆ ಓಡುತ್ತಿರುವುದರಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಪ್ರಕೃತಿಯನ್ನೇ ದೇವರೆಂದು ಪೂಜಿಸಿ ಆರಾಧಿಸಬೇಕು, ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದಿಗೂ ಫಲ ನೀಡುತ್ತದೆ ಎಂಬುದನ್ನು ಮರೆಯಬಾರದು. ಸಮಾಜಸೇವೆ ಮತ್ತು ಸಮಾಜಮುಖಿ ಚಿಂತನೆ ಅಗತ್ಯ ಎಂದರು.
ಚನ್ನರಾಯಪಟ್ಟಣದ ಕಲಾಪರಿವಾರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಟಿಎಟಿಸಿಎಂಎಸ್ ಮಾಜಿ ಅಧ್ಯಕ್ಷ ನಂಜಪ್ಪ, ಯೋಗ ಕೇಂದ್ರದ ಮುಖ್ಯಸ್ಥ ಉಮಾ ಮಹೇಶ್, ಮುಖಂಡರಾದ ತಿಮ್ಮಪ್ಪ, ಮಹದೇವಪ್ಪ, ಆನಂದ್, ಆಧ್ಯಾತ್ಮಿಕ ಕೇಂದ್ರದ ಕಾರ್ಯದರ್ಶಿ, ಡಿ.ಸಿ.ಅಮೋಘ, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರಸ್ವಾಮಿ ಇದ್ದರು.