ಅರಕಲಗೂಡು ತಾಲೂಕು ಕಚೇರಿ ಆವರಣದಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಡಾ. ಅಂಬೇಡರ್ ಪುತ್ಥಳಿ ಗೋಪುರ.
ಅರಕಲಗೂಡು: ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪುತ್ಥಳಿಗೆ ನೂತನವಾಗಿ ನಿರ್ಮಿಸಿರುವ ಭವ್ಯ ರಕ್ಷಣಾ ಗೋಪುರ ಏ. 14ರಂದು ಉದ್ಘಾಟನೆಗೆ ಸಜ್ಜುಗೊಂಡಿದೆ.
ವಿಶ್ವಜ್ಞಾನ, ಸಾಮಾಜಿಕ ನ್ಯಾಯದ ಪ್ರತೀಕವಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಗೋಪುರ ನಿರ್ಮಾಣ ಕಾರ್ಯ ಮುಗಿದಿದ್ದು ಉದ್ಘಾಟನೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ತಾಲೂಕು ಕಚೇರಿ ಹೃದಯ ಭಾಗದಲ್ಲಿ ನಿರ್ಮಿಸಲಾದ ಈ ಭವ್ಯ ಗೋಪುರವು ಜನರ ಗಮನ ಸೆಳೆಯುತ್ತಿದೆ. ಕಳೆದ 2012ರಲ್ಲಿ ಡಾ. ಅಂಬೇಡ್ಕರ್ ಪುತ್ಥಳಿ ಉದ್ಘಾಟನೆ ಭಾಗ್ಯ ಕಂಡಿತ್ತು. ಇದೀಗ ಗೋಪುರವು ಆಧುನಿಕ ವಿನ್ಯಾಸದೊಂದಿಗೆ ಅಂಬೇಡ್ಕರ್ ಅವರ ಭವ್ಯ ಪುತ್ಥಳಿಯನ್ನು ಒಳಗೊಂಡಿದೆ. ವಿಶೇಷ ಮಾದರಿಯಲ್ಲಿ ಗೋಪುರದ ಅಂಧ ಹೆಚ್ಚಿಸಲಾಗಿದೆ.
ಶಾಸಕ ಎ. ಮಂಜು ಅವರ ನೇತೃತ್ವದಲ್ಲಿ ಅಂಬೇಡ್ಕರ್ ಜಯಂತಿಯಂದೇ ಗೋಪುರ ಉದ್ಘಾಟನಾ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದ್ದು, ಜನಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಸಮಾನತೆ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ವಿಶೇಷ ಭಾಷಣಗಳೂ ನಡೆಯಲಿವೆ. ಸ್ಥಳೀಯರು ಈ ಗೋಪುರವನ್ನು ಸ್ವಾಗತಿಸಿದ್ದು ಇದು ಯುವಜನತೆಗೆ ಪ್ರೇರಣೆ ನೀಡುವ ಸ್ಮಾರಕವಾಗಲಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಲೂಕು ಆಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ಎರಡನೇ ಹಂತಕ್ಕೆ ಇಂದು ಚಾಲನೆ: ಪಟ್ಟಣದ ಪೇಟೆ ಕೆಇಬಿ ರಸ್ತೆಯ ಹೃದಯ ಭಾಗದಲ್ಲಿ ಬಹುಕಾಲದ ಕನಸಾಗಿದ್ದ ಭವ್ಯ ಅಂಬೇಡ್ಕರ್ ಭವನದ ನಿರ್ಮಾಣ ಕಾರ್ಯವು ಮತ್ತೊಂದು ಮಹತ್ವದ ಹಂತವನ್ನು ತಲುಪಿದ್ದು, ಎರಡನೇ ಹಂತದ ಕಾಮಗಾರಿಗೆ ಏ. 14ರಂದು ಶಾಸಕ ಎ. ಮಂಜು ಭೂಮಿಪೂಜೆ ನೆರವೇರಿಸಲಿದ್ದಾರೆ.
ಮೊದಲ ಹಂತದಲ್ಲಿ ಮೂಲಕಟ್ಟಡ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಇದೀಗ ಎರಡನೇ ಹಂತದಲ್ಲಿ ಒಳಾಂಗಣ ಸೌಲಭ್ಯಗಳು, ಸಭಾಂಗಣ ವ್ಯವಸ್ಥೆ, ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಈ ಹಂತದ ಕಾಮಗಾರಿಗೆ ಸರ್ಕಾರ ಅನುದಾನ ಒದಗಿಸಿದೆ. ಭವನವು ಶುಭ ಸಮಾರಂಭಗಳಿಗಷ್ಟೇ ಅಲ್ಲದೆ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರವಾಗಲಿದೆ.