ಅರಕಲಗೂಡಿನಲ್ಲಿ ಜಗಜೀವನ್ ರಾಂ ಮತ್ತು ಅಂಬೇಡ್ಕರ್ ಅವರ ಜಯಂತಿ ಆಚರಣೆ ಪೂರ್ವಭಾವಿ ಸಭೆ ಶಾಸಕ ಎ.ಮಂಜು ಅಧ್ಯಕ್ಷತೆಯಲ್ಲಿ ನಡೆಯಿತು. ತಹಸೀಲ್ದಾರ್ ಕೆ.ಸಿ. ಸೌಮ್ಯಾ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. 
ಹಾಸನ

ಬಾಬೂಜಿ, ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

ಅರಕಲಗೂಡು: ಸಮಾಜದ ಪರಿವರ್ತನೆಗೆ ಶ್ರಮಿಸಿದ ಬಾಬು ಜಗಜೀವನ ರಾಮ್ ಮತ್ತು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಶಾಸಕ ಎ.ಮಂಜು ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏ.5ರಂದು ಪಟ್ಟಣದ ದೇವರಾಜು ಅರಸು ಭವನದಲ್ಲಿ ಬಾಬು ಜಗಜೀವನ ರಾನ್ ಅವರ 119ನೇ ಜಯಂತಿ ಆಚರಣೆ ಸಮಾರಂಭ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕು ಆಡಳಿತ ವತಿಯಿಂದ ನಡೆಯುವ ಬಾಬು ಜಗಜೀವನ ರಾಮ್ ಮತ್ತು ಅಂಬೇಡ್ಕರ್ ಜಯಂತಿ ಆಚರಣೆ ಸಮಾರಂಭದಲ್ಲಿ ಸಮಾಜದ ಮುಖಂಡರು, ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವ ಮೂಲಕ ಮಹನೀಯರನ್ನು ಗೌರವಿಸಬೇಕಿದೆ. ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕಿದೆ ಎಂದರು.
ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆಯು ತಾಲೂಕು ಕಚೇರಿ ಆವರಣದಲ್ಲಿ ಜರುಗಲಿದೆ. ವಿಶೇಷವಾಗಿ ನೂತನವಾಗಿ ನಿರ್ಮಾಣಗೊಂಡಿರುವ ತಾಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆ ಗೋಪುರ ಉದ್ಘಾಟನೆ ಹಾಗೂ ಬೃಹತ್ ವೇದಿಕೆ ಸಮಾರಂಭ ಆಯೋಜಿಸಲಾಗಿದೆ. ಇದಕ್ಕೂ ಮುನ್ನಾ ಅನಕೃ ವೃತ್ತದಿಂದ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ 135 ಕುಂಭ ಕಳಸ, ಕಲಾ ತಂಡಗಳೊಂದಿಗೆ ನಡೆಯಲಿದೆ. ವಿಶ್ವಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಈ ಕಾರ್ಯಕ್ರಮದ ಉಸ್ತುವಾರಿಯನ್ನು ತಾಲೂಕು ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ನೋಡಿಕೊಳ್ಳಬೇಕು. ಇದಕ್ಕಾಗಿ ಇದೇ ಆವರಣದಲ್ಲಿ ಪ್ರತ್ಯೇಕವಾಗಿ ಶಾಮಿಯಾನ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಎರಡು ಕಾರ್ಯಕ್ರಮಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಗೌರವ ಸಮರ್ಪಣೆ, ವಿಶೇಷವಾಗಿ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಈ ಇಬ್ಬರು ಮಹನೀಯರ ಜಯಂತಿ ಆಚರಣೆ ಕಾರ್ಯಕ್ರಮ ಹಬ್ಬವಾಗಿ ಜರುಗಲು ಸಮಾಜದ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘಟನೆಗಳ ಸದಸ್ಯರನ್ನು ಆಹ್ವಾನಿಸಲು ಕ್ರಮವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ತಹಸೀಲ್ದಾರ್ ಕೆ.ಸಿ.ಸೌಮ್ಯಾ, ದಲಿತ ಸಂಘಟನೆಗಳ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.