Ambedkar Jayanti 
ಹಾಸನ

ಸಮಾನತೆಯ ಬದುಕು ಲಭಿಸಲು ಅಂಬೇಡ್ಕರ್ ಕಾರಣ

ಪ್ರಮುಖ ಮುಖ್ಯಾಂಶಗಳು

  • ಸಮಾನತೆಯ ಬದುಕು ಲಭಿಸಲು ಅಂಬೇಡ್ಕರ್ ಕಾರಣ
  • ಸಂಸದ ಶ್ರೇಯಸ್ ಎಂ.ಪಟೇಲ್ ಅಭಿಮತ
  • ಜಿಲ್ಲಾಡಳಿತದಿಂದ ಬಾಬಾ ಸಾಹೇಬ್ ಜಯಂತಿ
ಹಾಸನ: ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ, ಸಮಾನತೆಯಿಂದ ಬದುಕಲು ಕಾರಣರಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ದೇಶಕ್ಕೆ ನಾಯಕರು ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಪುಸ್ತಕಗಳನ್ನು ಓದಲು ವರ್ಷದ 365 ದಿನಗಳು ಸಾಲದು, ಅವರ ಜಯಂತಿ ದಿನ ಮಾತ್ರ ಬಾಬಾ ಸಾಹೇಬ್ ಅವರನ್ನು ನೆನೆಯಬಾರದು ಪ್ರತಿದಿನ ಕೂಡ ಅವರನ್ನು ನೆನೆದು ಅವರು ನೀಡಿರುವ ಮಾರ್ಗದಲ್ಲೇ ನೆಡೆಯಬೇಕು ಎಂದು ಹೇಳಿದರು.
ಶಾಸಕ ಸ್ವರೂಪ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ಅಂಬೇಡ್ಕರ್ ಶ್ರಮಿಸಿದರು. ಅತ್ಯುತ್ತಮ ಸಂವಿಧಾನ ರಚನೆ ಮಾಡಿ ಸಮಾಜದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಮಾನ ಎಂದು ಸಾರಿದರು ಎಂದು ಹೇಳಿದರು.
ಪ್ರತಿ ಹಳ್ಳಿಯಲ್ಲೂ ಹೇಗೆ ದೇವಸ್ಥಾನ ಇರುತ್ತದೆ ಅದೇ ರೀತಿ ಶಾಲೆ ಇರಬೇಕು. ಸಮಾಜದಲ್ಲಿರುವ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಗೂ ಶಿಕ್ಷಣ ಮುಖ್ಯ, ಶಿಕ್ಷಣವನ್ನು ಪಡೆದರೆ ಎಲ್ಲವನ್ನು ಸಾಧಿಸಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಜಗತ್ತಿನ ಇತಿಹಾಸದಲ್ಲಿ ಸೂರ್ಯ, ಚಂದ್ರ ಇರುವವರೆಗೂ ಆಧುನಿಕ ಭಾರತದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಅಮರ. ಜ್ಞಾನದಿಂದ ಮಾತ್ರ ಅಜ್ಞಾನವನ್ನು ತೊಳೆಯಲು ಸಾಧ್ಯ, ಜ್ಞಾನವಿದ್ದರೆ ಜಗತ್ತಿನಲ್ಲಿ ಎಲ್ಲವನ್ನು ಗೆಲ್ಲಲು ಸಾಧ್ಯ ಎಂದು ಹೇಳಿದರು.
ಅಂಬೇಡ್ಕರ್ ಅವರು ಪ್ರಮುಖವಾಗಿ ಶಿಕ್ಷಣ, ಸಂಘಟನೆ ಹೋರಾಟಗಳಿಗೆ ಹೆಚ್ಚಾಗಿ ಒತ್ತು ನೀಡುತ್ತಿದ್ದರು, ಪ್ರತಿಯೊಬ್ಬ ಪ್ರಜೆಯೂ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಅಂಬೇಡ್ಕರ್ ಅವರು 35ಕ್ಕಿಂತ ಹೆಚ್ಚು ಪದವಿಗಳನ್ನು ಪಡೆದಿದ್ದಾರೆ ಇಂತಹ ವಿಚಾರಗಳನ್ನು ಗಮನಿಸಿದಾಗಲೇ ಅವರಿಗೆ ಶಿಕ್ಷಣದ ಮೇಲಿರುವ ಗೌರವ ತಿಳಿಯುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಟೇಲ್ ಶಿವಣ್ಣ ಮಾತನಾಡಿ, ವರ್ಷದ 365 ದಿನವು ಬಾಬಾ ಸಾಹೇಬ್ ಅವರ ಬಗ್ಗೆ ತಿಳಿದುಕೊಂಡು, ಅವರ ಬರೆದಿರುವಂತಹ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.
ಬೆಂಗಳೂರು ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥರಾದ ಡಾ.ಶಿವಕುಮಾರ್ ಕಾರ್ಯಕ್ರಮದ ಕುರಿತು ಮಾತನಾಡಿ, ದೇಶವನ್ನು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ತರವಾದ್ದದ್ದು ಎಂದು ತಿಳಿಸಿದರು.
ದೇಶದಲ್ಲಿ ಮೊದಲಿಗೆ ಮಹಿಳೆಯರ ಪರ ವಾದ ಮಾಡಿದವರು ಅಂಬೇಡ್ಕರ್. ಮಹಿಳೆಯರಿಗೂ ಸಹ ಸಮಾನತೆ ದೊರಕಬೇಕು ಎಂಬ ಆಲೋಚನೆ ಹೊಂದಿ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದರು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಲ್ಲೇಶ್ ಗೌಡ, ಸಂಘಟನೆಯ ಮುಖಂಡರಾದ ಸಂದೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ದೂದ್ ಫೀರ್, ತಹಸೀಲ್ದಾರ್ ಗೀತಾ ಇತರರಿದ್ದರು.
ಪುತ್ಥಳಿಗೆ ಮಾಲಾರ್ಪಣೆ
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ.ಬಿ. ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಡಿಸಿ ಮಾಲಾರ್ಪಣೆ ಮಾಡಿ ನಂತರ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಸ್ವರೂಪ್ ಪ್ರಕಾಶ್, ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್ ಫೀರ್ ಹಾಗೂ ಸಮುದಾಯ ಮುಖಂಡರು ಹಾಜರಿದ್ದರು.