ಮಾಡಾಳು ಗ್ರಾಮದಲ್ಲಿ ಶ್ರೀ ಸ್ವರ್ಣ ಗೌರಮ್ಮನವರ ದೇವಸ್ಥಾನದಲ್ಲಿ ಸೋಮವಾರ ಕಾತ್ಯಾಯಿನಿ ಅಮಾವಾಸ್ಯೆ ಪೂಜಾ ಕಾರ್ಯಕ್ರಮ ನೆರವೇರಿತು. ಶ್ರೀ ಚೇತನ್ ಮರಿದೇವರು, ಓಂಕಾರಪ್ಪ, ಶಿವಲಿಂಗಪ್ಪ, ನಟರಾಜ್ ಬಸವರಾಜು ಇತರರು ಇದ್ದರು.
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಕಾತ್ಯಾಯಿನಿ ಅಮಾವಾಸ್ಯೆ ಅಂಗವಾಗಿ ಕೋಡಿಮಠ ಜಗದ್ಗುರು ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಂಕಲ್ಪದಂತೆ ಸೋಮವಾರ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ನೆರವೇರಿತು.
ಶ್ರೀ ಕ್ಷೇತ್ರ ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮುರಿ ದೇವರು ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಮನುಷ್ಯನ ನಡೆ-ನುಡಿ, ಆಚಾರ-ವಿಚಾರ ಸತ್ಯದ ಪರವಾಗಿರಬೇಕು. ಸಜ್ಜನರಿಗೆ ಬರುವ ಆಪತ್ತು ದುರ್ಜನರಿಗೆ ಬರುವ ಸಂಪತ್ತು ಯಾವುದು ಬಹಳ ದಿನ ಉಳಿಯುವುದಿಲ್ಲ ಎಂದರು.
ಮನುಷ್ಯನಿಗೆ ಶಿವಜ್ಞಾನದ ಬೀಜ ಬಿತ್ತಿ ಸಂಸ್ಕಾರ ನೀಡುವಾತನೇ ಶ್ರೀಗುರು. ಆತನ ಜೀವನ ಉತ್ತಮವಾಗಿ ಸಾಗಲು ಗುರು ಕಾರುಣ್ಯದ ಕಿರಣ ಬೀಳಬೇಕು ಎಂದರು.
ನಂತರ ಸ್ವರ್ಣ ಗೌರಮ್ಮ ದೇವಿ, ಮಹಾತಪಸ್ವಿ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ಅರ್ಚಕರು ಪೂಜೆ ಸಲ್ಲಿಸಿ ಕರ್ಪೂರದಾರತಿ ಬೆಳಗಿದರು.
ಅಮಾವಾಸ್ಯೆ ನಿಮಿತ್ತ ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಭಕ್ತರಿಗೆ ಗ್ರಾಮದ ಈರೇಗೌಡರ ಶಿವಲಿಂಗಪ್ಪ ಮತ್ತು ಮಕ್ಕಳು ದಾಸೋಹ ವ್ಯವಸ್ಥೆ ಮಾಡಿದ್ದರು.
ಮಾಡಾಳು ಸೇರಿದಂತೆ ಸೀತಾಪುರ ಕೊಪ್ಪಲು, ಯರೇಹಳ್ಳಿ, ಸಸಿವಾಳ, ರಾಂಪುರ, ಡಿ,ಎಂ.ಕುರ್ಕೆ, ಹಾರನಹಳ್ಳಿ, ಅಣ್ಣಾ ನಾಯಕನಹಳ್ಳಿ, ನಾಗತಿಹಳ್ಳಿ, ವೈ.ಜಿ.ಹಳ್ಳಿ, ಪಿ.ಹೊಸಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಬೊಮ್ಮಸಮುದ್ರ, ಶಂಕರನಹಳ್ಳಿ, ಕಡಲಮಗ್ಗೆ ಗ್ರಾಮಸ್ಥರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.