ಆಲೂರು ತಾಲೂಕಿನ ಕಾಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶೌಚಗೃಹವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿ ಮಾತನಾಡಿದರು. ಕೃಷ್ಣೇಗೌಡ, ಮಂಜುಳಾ, ಮೈಮುನಾ, ಮಣಿ ಮತ್ತಿತರರಿದ್ದರು. 
ಹಾಸನ

ಶಾಲೆಗಳ ಉಳಿವಿಗೆ ಸರ್ಕಾರ ಗಂಭೀರ ಚಿಂತನೆ ನಡೆಸಲಿ

ಆಲೂರು: ಸರ್ಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಆಗ್ರಹಿಸಿದರು.
ತಾಲೂಕಿನ ಕೆ.ಹೊಸಕೋಟೆ ಹೋಬಳಿ, ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ನೂತನ ಶೌಚಗೃಹ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಉಳಿದು ಬೆಳೆಯುವುದು ಸಮಾಜದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಹಾಗೂ ಉತ್ತಮ ಶಿಕ್ಷಣ ದೊರೆಯಬೇಕು ಎಂಬುದು ಸರ್ಕಾರದ ಆದ್ಯತೆಯಾಗಬೇಕು. ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚಿದರೆ ಬಡವರು, ರೈತಾಪಿ ಕುಟುಂಬಗಳು ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ದುಬಾರಿಯಾಗಿ ಕೈಗೆಟುಕದಂತಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕ್ಷೇತ್ರದ ಶಾಸಕನಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಸರ್ಕಾರಿ ಶಾಲೆಗಳ ಅಳಿವು-ಉಳಿವು ಶಿಕ್ಷಕರು, ಪಾಲಕರು ಮತ್ತು ಜನಪ್ರತಿನಿಧಿಗಳ ಸಮನ್ವಯದ ಮೇಲೆ ಅವಲಂಬಿತವಾಗಿದೆ. ತಾವು ಕ್ಷೇತ್ರ ಪ್ರವಾಸದ ವೇಳೆ ಸರ್ಕಾರಿ ಶಾಲೆಗಳು, ಅಂಗನವಾಡಿಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದು ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಉತ್ತಮ ಕಟ್ಟಡ, ಸುಸಜ್ಜಿತ ಶೌಚಗೃಹ, ಆಟದ ಮೈದಾನ ಹಾಗೂ ಅಗತ್ಯ ಮೂಲಸೌಕರ್ಯಗಳ ಜತೆಗೆ ಗುಣಮಟ್ಟದ ಬೋಧನೆ ದೊರೆತರೆ ಪಾಲಕರಲ್ಲಿ ವಿಶ್ವಾಸ ಮೂಡಿ ಮಕ್ಕಳ ದಾಖಲಾತಿಯೂ ಹೆಚ್ಚುತ್ತದೆ ಎಂದರು. ಮಲೆನಾಡು ಪ್ರದೇಶದಲ್ಲಿ ಆನೆ ಹಾವಳಿ ಹಾಗೂ ಗ್ರಾಮಗಳ ನಡುವಿನ ದೂರ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರತಿ ಹಳ್ಳಿಯಲ್ಲೂ ಸರ್ಕಾರಿ ಶಾಲೆಗಳು ಉಳಿಯುವುದು ಅತ್ಯಗತ್ಯ. ಆದ್ದರಿಂದ ಶಿಕ್ಷಕರು, ಪಾಲಕರು ಹಾಗೂ ಗ್ರಾಮಸ್ಥರು ಪ್ರತಿವರ್ಷ ಮಕ್ಕಳ ದಾಖಲಾತಿ ಹೆಚ್ಚಿಸಲು ಒಟ್ಟಾಗಿ ಶ್ರಮಿಸಬೇಕು, ಸರ್ಕಾರಿ ಶಾಲೆಗಳನ್ನು ಉಳಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಇಸಿಒ ಮಂಜುಳಾ, ಸಿಆರ್‌ಪಿ ಮೈಮುನಾ,
ಮುಖ್ಯಶಿಕ್ಷಕಿ ಮಣಿ, ಸಹ ಶಿಕ್ಷಕರಾದ ಭಾನುಮತಿ, ಕವಿತಾ, ಸಚಿನ್, ಗ್ರಾಪಂ ಮಾಜಿ ಸದಸ್ಯ ಚಂದನ್ ಹೈದೂರು, ಬಿಜೆಪಿ ಮುಖಂಡ ಪ್ರಸಾದ್, ಕಾಡ್ಲು ಗ್ರಾಮದ ಮುಖಂಡರಾದ ಮೋಹನ್ ಕಾಡ್ಲೂರು, ಮಂಜುನಾಥ್ ,ಜಗದೀಶ್, ಕೆಂಚಯ್ಯ, ಕೆಂಚಪ್ಪ ಮತ್ತಿತರರು ಹಾಜರಿದ್ದರು.