ಆಲೂರು: ಗದಗದ ಡಾ.ವಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಹಾಗೂ ಅಶ್ವಿನಿ ಪ್ರಕಾಶನ ಕೊಡಮಾಡುವ 2026ನೇ ಸಾಲಿನ ಪಂಡಿತ ಪುಟ್ಟರಾಜ ಗವಾಯಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿಗೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹಾಗೂ ಸಮಾಜ ಸೇವಕ ಆಲೂರು ತಾಲೂಕಿನ ಎಸ್.ಎಂ.ರಘುಪಾಳ್ಯ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಡಾ.ವಿ.ವಿ.ಹಿರೇಮಠ ತಿಳಿಸಿದರು.
ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ರಘುಪಾಳ್ಯ ಅವರು ಜಿಲ್ಲಾ ಕರವೇ ಕಾರ್ಯದರ್ಶಿಗಳಾಗಿ ಹಲವು ವರ್ಷಗಳಿಂದ ಕನ್ನಡ ನಾಡು ನುಡಿಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಜತೆಗೆ ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಯೋಗ ಶಿಬಿರಗಳನ್ನು ನಡೆಸಿದ್ದಾರೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಹಲವು ಶಾಲಾ ಮಕ್ಕಳಿಗೆ ಸಮವಸ್ತ್ರ, ಲೇಖನ ಸಾಮಗ್ರಿ, ಆಟೋಪಕರಣ, ಪೀಠೋಪಕರಣಗಳನ್ನು ನೀಡುತ್ತಾ ಬಂದಿದ್ದಾರೆ. ಇವರ ಸಮಾಜ ಸೇವಾ ಕ್ಷೇತ್ರದ ಕಾರ್ಯವನ್ನು ಗುರುತಿಸಿ ಗದಗ ಜಿಲ್ಲಾ ವಿ.ಬಿ.ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಮಾರ್ಚ್ 3ರಂದು ಗದಗ ನಗರದಲ್ಲಿ ನಡೆಯುವ ಪಂಡಿತ ಪುಟ್ಟರಾಜ ಗವಾಯಿ ಅವರ 112ನೇ ಜಯಂತ್ಯುತ್ಸವ ಸಮಾರಂಭದಲ್ಲಿ ರಾಜ್ಯಮಟ್ಟದ ಪಂಡಿತ ಪುಟ್ಟರಾಜ ಗವಾಯಿ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.