ನಗರದ ರಾಜಘಟ್ಟ ರೈಲ್ವೆ ನಿಲ್ದಾಣದ ರಸ್ತೆಯ ಸಮೀಪದ ಗೂಡ್ಸ್‌ಶೆಡ್ ಪ್ರದೇಶದಲ್ಲಿ ಲಾರಿ ನಿಲುಗಡೆ ಅನುಮತಿ ನೀಡುವಂತೆ ಆಗ್ರಹಿಸಿ ಗೂಡ್ಸ್ ಲಾರಿ ಮಾಲೀಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕೆ.ಟಿ.ಸುರೇಶ್, ಲೋಕೇಶ್, ಮಂಜುನಾಥ್, ಶೇಖರ್ ಕುಮಾರ್, ಸಂಜಯ್, ಬಲರಾಮ್ ಇತರರಿದ್ದರು. 
ಹಾಸನ

ಲಾರಿಗಳ ನಿಲುಗಡೆಗೆ ಅನುಮತಿ ನೀಡಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಲಾರಿಗಳ ನಿಲುಗಡೆಗೆ ಅನುಮತಿ ನೀಡಿ
  • ಅಪರ ಜಿಲ್ಲಾಧಿಕಾರಿಗೆ ಗೂಡ್ಸ್ ಲಾರಿ ಮಾಲೀಕರ ಮನವಿ
ಹಾಸನ: ನಗರದ ರಾಜಘಟ್ಟ ರೈಲ್ವೆ ನಿಲ್ದಾಣ ರಸ್ತೆ ಸಮೀಪದ ಗೂಡ್ಸ್‌ಶೆಡ್ ಪ್ರದೇಶದಲ್ಲಿ ಲಾರಿಗಳನ್ನು ನಿಲುಗಡೆ ಮಾಡಿಕೊಂಡು ಕೃಷಿ ಉತ್ಪನ್ನಗಳ ಸಾಗಣೆ ಕಾರ್ಯಕ್ಕೆ ಅನುಮತಿ ನೀಡಬೇಕು ಎಂದು ಗೂಡ್ಸ್ ಲಾರಿ ಮಾಲೀಕರು ಇತ್ತೀಚೆಗೆ ಅಪರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ಸುರೇಶ್ ಮಾತನಾಡಿ, 30 ವರ್ಷಗಳ ಹಿಂದೆ ಶಾಸಕ ಎಚ್.ಎಸ್.ಪ್ರಕಾಶ್ ಅವರ ಮುತುವರ್ಜಿಯಿಂದ ಅಂದಿನ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ರಾಜಘಟ್ಟ ರಸ್ತೆ ಬಳಿಯ ಈ ಜಾಗವನ್ನು ಲಾರಿ ನಿಲುಗಡೆಗಾಗಿ ಬಳಸಲು ಅವಕಾಶ ಪಡೆಯಲಾಗಿದೆ. ಅಂದಿನಿಂದ ಇಂದಿನವರೆಗೆ ಯಾವುದೇ ವ್ಯತ್ಯಯವಿಲ್ಲದೆ ಲಾರಿಗಳನ್ನು ನಿಲ್ಲಿಸಿಕೊಂಡು ವಿವಿಧ ಅಗತ್ಯ ವಸ್ತುಗಳ ಸಾಗಣೆ ನಿರ್ವಹಿಸುತ್ತಿದ್ದಾರೆ. ಈ ಪ್ರದೇಶವು ಹಾಸನ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರಮುಖ ಸರಬರಾಜು ಕೇಂದ್ರವಾಗಿದ್ದು, ಪ್ರತಿದಿನ ರೈತರಿಗೆ ಅಗತ್ಯವಾದ ಗೊಬ್ಬರ, ಆಲೂಗಡ್ಡೆ ಸೇರಿದಂತೆ ಕೃಷಿ ಸಂಬಂಧಿತ ವಸ್ತುಗಳು, ಅಕ್ಕಿ, ಸಿಮೆಂಟ್, ಕಟ್ಟಡ ಸಾಮಗ್ರಿಗಳು ಮತ್ತು ಇತರ ದಿನನಿತ್ಯ ಬಳಕೆಯ ವಸ್ತುಗಳನ್ನು ಇಲ್ಲಿಂದಲೇ ಸಾಗಿಸಲಾಗುತ್ತಿದೆ ಎಂದರು.
ಈ ಪ್ರದೇಶಕ್ಕೆ ಬಾಡಿಗೆ ವಸೂಲಿ ಮಾಡಲಾಗುತ್ತಿಲ್ಲ. ನಗರದಲ್ಲಿ ದೊಡ್ಡ ಪ್ರಮಾಣದ ವಾಹನಗಳಿಗೆ ಪರ್ಯಾಯ ನಿಲುಗಡೆ ಸ್ಥಳ ಕೊರತೆ ಇರುವುದರಿಂದ ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿಯೇ ಲಾರಿಗಳನ್ನು ನಿಲ್ಲಿಸಲು ಅನಿವಾರ್ಯತೆ ಉಂಟಾಗಿದೆ. ರೈಲ್ವೆ ಅಧಿಕಾರಿಗಳು ಸಹ ಇದಕ್ಕೆ ಸಹಕಾರ ನೀಡುತ್ತಿದ್ದು, ಯಾವುದೇ ಅಡಚಣೆ ಇಲ್ಲದೆ ಲಾರಿಗಳ ಸಂಚಾರ ಮತ್ತು ನಿಲುಗಡೆ ನಡೆಯುತ್ತಿದೆ. ಇದೇ ಪ್ರದೇಶದ ಪಕ್ಕದಲ್ಲಿರುವ ಸುಮಾರು 1.6 ಎಕರೆ ಸರ್ಕಾರದ ಜಾಗ ಹಲವು ವರ್ಷಗಳಿಂದ ಖಾಲಿ ಇದ್ದು ಅದನ್ನು ಲಾರಿ ನಿಲುಗಡೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಜಾಗವನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದೆ ಸಾರ್ವಜನಿಕ ಉಪಯೋಗಕ್ಕೆ ಬರುವಂತೆ ಮಾಡಿಕೊಂಡಿದ್ದೇವೆ ಎಂದರು.
ಇದೀಗ ಈ ಜಾಗ ನಮ್ಮದೆಂದು ಹೇಳಿ ಖಾಸಗಿ ವ್ಯಕ್ತಿಯೊಬ್ಬರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಲಾರಿ ನಿಲುಗಡೆಗೆ ಈ ಜಾಗವನ್ನು ನಿರಂತರವಾಗಿ ಬಳಸಲು ಅವಕಾಶ ನೀಡದಿದ್ದರೆ ಸಾಗಣೆ ವ್ಯವಸ್ಥೆಗೆ ಸಮಸ್ಯೆಯಾಗಲಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಸ್ತುತ ಬಳಸುತ್ತಿರುವ ಗೂಡ್ಸ್‌ಶೆಡ್ ಮತ್ತು ಪಕ್ಕದ ಸರ್ಕಾರಿ ಜಾಗದಲ್ಲಿಯೇ ಲಾರಿಗಳನ್ನು ನಿಲ್ಲಿಸಲು ಶಾಶ್ವತ ಅಥವಾ ತಾತ್ಕಾಲಿಕ ಅನುಮತಿ ನೀಡಬೇಕು ಎಂದು ಕೋರಿದರು.
ಗೂಡ್ಸ್ ಲಾರಿ ಮಾಲೀಕರ ಸಂಘದ ಲೋಕೇಶ್, ಮಂಜುನಾಥ್, ಶೇಖರ್ ಕುಮಾರ್, ಸಂಜಯ್, ಬಲರಾಮ್, ಶಾರಕ್ ಕುಮಾರ್ ಇತರರು ಇದ್ದರು.