ಹಾಸನ ನಗರದಲ್ಲಿ ಐಐಟಿ ಸ್ಥಾಪನೆಗೆ ಹಾಗೂ ಇತರ ಕೇಂದ್ರೀಯ ವಿಶ್ವ ವಿದ್ಯಾನಿಲಯಗಳ ಸ್ಥಾಪನೆಗೆ ಕೆಎಐಡಿಬಿ ವತಿಯಿಂದ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಅದೇ ಉದ್ದೇಶಕ್ಕೆ ಮೀಸಲಿಟ್ಟು ಆದೇಶ ಹೊರಡಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬರೆದಿರುವ ಪತ್ರವನ್ನು ಶಾಸಕ ಎಚ್.ಡಿ.ರೇವಣ್ಣ ಸೋಮವಾರ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಸಲ್ಲಿಸಿದರು. 
ಹಾಸನ

ಐಐಟಿ, ಕೇಂದ್ರೀಯ ವಿವಿ ಸ್ಥಾಪನೆಗೆ ಭೂಮಿ ಮೀಸಲಿಡಿ

ಪ್ರಮುಖ ಮುಖ್ಯಾಂಶಗಳು

  • ಐಐಟಿ, ಕೇಂದ್ರೀಯ ವಿವಿ ಸ್ಥಾಪನೆಗೆ ಭೂಮಿ ಮೀಸಲಿಡಿ
  • ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ಗೆ ಎಚ್.ಡಿ.ದೇವೇಗೌಡ ಪತ್ರ
ಹಾಸನ: ನಗರದಲ್ಲಿ ಐಐಟಿ ಸ್ಥಾಪನೆಗೆ ಹಾಗೂ ಇತರ ಕೇಂದ್ರೀಯ ವಿಶ್ವ ವಿದ್ಯಾನಿಲಯಗಳ ಸ್ಥಾಪನೆಗೆ ಕೆಐಎಡಿಬಿ ವತಿಯಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಅದೇ ಉದ್ದೇಶಕ್ಕೆ ಮೀಸಲಿಟ್ಟು ಆದೇಶ ಹೊರಡಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.
1057.24 ಎಕರೆ ಜಮೀನು ಪೈಕಿ 100 ಎಕರೆಯಷ್ಟು ಜಮೀನಲ್ಲಿ ಕೈಗಾರಿಕಾ ವಲಯದ ಯೋಜನೆ ರಚಿಸಿ ಅನುಷ್ಠಾನಗೊಳಿಸುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಟೆಂಡರ್ ಪ್ರಕ್ರಿಯೆ ರದ್ದುಪಡಿಸಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಭೆಯಲ್ಲಿ ಅನುಮೋದನೆ ಪಡೆದು ಐಐಟಿ ಸ್ಥಾಪನೆ ಹಾಗೂ ಇತರ ಕೇಂದ್ರೀಯ ವಿವಿ ಸ್ಥಾಪನೆಗೆ ಸ್ವಾಧೀನವಾಗಿರುವ ಜಮೀನು ಕಾಯ್ದಿರಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ನಗರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೆಐಎಡಿಬಿ ಮೂಲಕ ತಾಲೂಕಿನ ಬೂವನಹಳ್ಳಿ ಹಾಗೂ ಮತ್ತಿತರ ಗ್ರಾಮಗಳ ಸ.ನಂ. ಮತ್ತು ಸರ್ಕಾರಿ ಖರಾಬು ಸೇರಿ 1224.16 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಸಿ, ಈ ಪೈಕಿ 536 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ.
ಉಳಿಕೆ ಜಮೀನಿನಲ್ಲಿ ಭೂ ಸ್ವಾಧೀನ ಅಂತಿಮ ಪ್ರಕ್ರಿಯೆಯಲ್ಲಿರುವ 2008ರ ಜೆಎಂಸಿ ವರದಿಯಂತೆ ಅಧಿಸೂಚನೆ ಹೊರಡಿಸಿರುವ 420.10ರ ಪೈಕಿ ಕೈ ಬಿಟ್ಟಿರುವ 231 ಎಕರೆ ಜಮೀನನ್ನು ಈ ಹಿಂದಿನಂತೆಯೇ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಹಾಗೂ 2019 ಜ.17ರಂದು ಭೂ ಸ್ವಾಧೀನವಾಗಿರುವ 189.04 ಎಕರೆ ಮತ್ತು 30.01 ಎಕರೆ, ಒಟ್ಟಾರೆ 219.05 ಎಕರೆ ಜಮೀನಲ್ಲಿ 19 ಎಕರೆ ಜಮೀನು ಹೊರತುಪಡಿಸಿ, ಈ ಯೋಜನೆಯನ್ನು ಹಾಸನದ ಮಾಜಿ ಶಾಸಕರು, ಭೂ ಮಾಫಿಯಾ ಹಾಗೂ ರಿಯಲ್ ಎಸ್ಟೇಟ್ ಅವರೊಂದಿಗೆ ಕಂದಾಯ ಇಲಾಖಾಧಿಕಾರಿಗಳು ಶಾಮೀಲಾಗಿ ಮೂಲ ಪ್ರಸ್ತಾವನೆ ಮಾರ್ಪಡಿಸಿ 199.39 1/4 ಎಕರೆ ಜಮೀನುಗಳನ್ನು ಡೀನೋಟಿಫೈ ಮಾಡಲು ಕೈಗೊಂಡಿರುವ ಸರ್ಕಾರದ ನಿರ್ಣಯ ಮತ್ತು ಕೆಐಎಡಿಬಿ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಜಮೀನುಗಳನ್ನು ಬಿಟ್ಟು ಹಾಸನ ವಿಮಾನ ನಿಲ್ದಾಣದ ಯೋಜನೆಗೆ ಸ್ವಾಧೀನಪಡಿಸಿಕೊಂಡ ಮೂಲ ಯೋಜನೆಯಂತೆಯೇ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.
ಹಾಸನ ವಿಮಾನ ನಿಲ್ದಾಣವನ್ನು ಪ್ರಾಥಮಿಕ ಹಂತದಲ್ಲಿ ಶಿವಮೊಗ್ಗ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಮಾದರಿಯಲ್ಲಿ ಏರ್‌ಬಸ್-320 ಹಾರಿ-ಇಳಿಯುವ ಹಂತದ ವಿಮಾನ ನಿಲ್ದಾಣಕ್ಕೆ ಉನ್ನತೀಕರಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಈ ಪತ್ರವನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಎಂ.ಬಿ.ಪಾಟೀಲ್ ಅವರಿಗೆ ಸಲ್ಲಿಸಿ, ದೇವೇಗೌಡರ ಪತ್ರದ ಪ್ರಕಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.