ಶ್ರೀ ಚನ್ನಕೇಶವಸ್ವಾಮಿ ಜಾತ್ರ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಖ್ಯರಸ್ತೆಯಲ್ಲಿ ಯಾವುದೇ ವಾಹನಗಳು ಒಳ ಹೋಗದಂತೆ ಬ್ಯಾರಿಕೇಡ್ ಹಾಕಲಾಗಿದೆ.
ಬೇಲೂರು: ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಮಾ.31 ಹಾಗೂ ಏ.1ರಂದು ನಡೆಯಲಿರುವ ಬ್ರಹ್ಮ ರಥೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಬ್ರಹ್ಮರಥೋತ್ಸವಕ್ಕೆ ಸಾವಿರಾರು ಜನರು ಆಗಮಿಸುವುದರಿಂದ ವಾಹನಗಳ ದಟ್ಟಣೆ ನಿಯಂತ್ರಣಕ್ಕಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಲತಾಕುಮಾರಿ ಆದೇಶದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಮಾ.23ರಿಂದ ಪ್ರಾರಂಭವಾಗಿರುವ ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಏ.5ರವರೆಗೆ ನಡೆಯಲಿದೆ. ಇದರ ಅಂಗವಾಗಿ ಮಾ.31 ಹಾಗೂ ಏ.1ರಂದು ನಡೆಯಲಿರುವ ಬ್ರಹ್ಮ ರಥೋತ್ಸವಕ್ಕೆ ಮಹಿಳೆಯರು, ಮಕ್ಕಳು ಸೇರಿದಂತೆ 70ರಿಂದ 80 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ರಥೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದೇವಸ್ಥಾನದ ಸುತ್ತಮುತ್ತಲಿನ ಮುಖ್ಯ ರಸ್ತೆ, ವೈಕುಂಠ ಬೀದಿ, ಕೆರೆ ಬೀದಿ, ಮಸೀದಿ ರಸ್ತೆ, ದೇವಸ್ಥಾನದ ಮುಂಭಾಗ ಹಾಗೂ ಹಿಂಭಾಗದ ರಸ್ತೆ, ದೇವಸ್ಥಾನದ ಎಡ ಹಾಗೂ ಬಲ ಭಾಗದ ರಸ್ತೆಗಳಲ್ಲಿ ಪೊಲೀಸ್ ಅಧೀಕ್ಷಕರ ಮನವಿ ಹಾಗೂ ಸ್ಥಳೀಯ ಆಡಳಿತದ ವರದಿ ಆಧರಿಸಿ ವಾಹನ ಸಂಚಾರ ನಿಷೇಧಿಸಲಾಗಿದೆ. ರಥೋತ್ಸವದ ದಿನದಂದು ಭಕ್ತರು ಹಾಗೂ ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ತುರ್ತು ಸೇವೆಗಳಾದ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳಿಗೆ ಮಾತ್ರ ವಿಶೇಷ ಅನುಮತಿ ಇರಲಿದೆ. ಅಲ್ಲದೆ ಪೊಲೀಸ್, ಸಾರಿಗೆ, ಕೆಎಸ್‌ಆರ್‌ಟಿಸಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಂಚಾರ ವ್ಯವಸ್ಥೆ ಹಾಗೂ ಭದ್ರತೆ ಕಾಪಾಡಬೇಕು. ರಥೋತ್ಸವದ ಯಶಸ್ವಿ ಹಾಗೂ ಸುರಕ್ಷಿತ ಆಯೋಜನೆಗಾಗಿ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಬೇಲೂರು ಪೊಲೀಸರು ಈಗಾಗಲೇ ತಿಳಿಸಿರುವ ಎಲ್ಲ ರಸ್ತೆ, ಬೀದಿಗಳಲ್ಲೂ ಬ್ಯಾರಿಕೇಡ್‌ನೊಂದಿಗೆ ಪೊಲೀಸರನ್ನು ನಿಯೋಜಿಸಿ ಯಾವುದೇ ವಾಹನಗಳನ್ನು ಬಿಡದೆ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಸಹ ತಾಲೂಕು ಆಡಳಿತದೊಂದಿಗೆ ಸಹಕಾರ ನೀಡುವ ಮೂಲಕ ಜಾತ್ರಾ ಮಹೋತ್ಸವದ ಯಶಸ್ಸಿಗೆ ಮುಂದಾಗಬೇಕಿದೆ.
ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ, ಪಿಎಸ್‌ಐ ಶಿವನಗೌಡ.ಜಿ.ಪಾಟೀಲ್, ಸಿಬ್ಬಂದಿ ದೇವರಾಜು ಸೇರಿದಂತೆ ಸಿಬ್ಬಂದಿ ಇದ್ದರು.