ಬೇಲೂರು ಪುರಸಭೆಗೆ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಅಕ್ರಂ ಷರೀಫ್ ಅವರನ್ನು ಅಭಿನಂದಿಸಲಾಯಿತು. 
ಹಾಸನ

ಬೇಲೂರು ಪುರಸಭೆಗೆ ಅಕ್ರಂ ಷರೀಫ್ ಅಧ್ಯಕ್ಷ

ಬೇಲೂರು: ಬೇಲೂರು ಪುರಸಭೆಗೆ 23ನೇ ವಾರ್ಡ್ ಸದಸ್ಯ ಅಕ್ರಂ ಷರೀಫ್ ಸೋಮವಾರ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಈ ಮೂಲಕ ಕಳೆದ ಒಂದು ವರ್ಷದಿಂದ ಹೊಗೆಯಾಡುತ್ತಿದ್ದ ಅಧ್ಯಕ್ಷ ಗಾದಿಯ ತೊಳಲಾಟಕ್ಕೆ ಕಾಂಗ್ರೆಸ್ ಪಕ್ಷದ ವಿಪ್ ನಡುವೆಯೂ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಅಕ್ರಂ ಷರೀಫ್ ಆಯ್ಕೆಯಾಗುವ ಮೂಲಕ ಅಂಕಿತ ಹಾಡಿದರು.
ಹಿಂದಿನ ಅಧ್ಯಕ್ಷ ಎ.ಆರ್.ಅಶೋಕ್ ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಅಧಿಕಾರದಿಂದ ಕೆಳಗೆ ಇಳಿಸಿದ ನಂತರ ಪುರಸಭೆಯಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದು ನ್ಯಾಯಾಲಯದ ಮೆಟ್ಟಿಲೇರಿತ್ತು. ಇದಕ್ಕೆ ಪ್ರಮುಖವಾಗಿ ಕಾಂಗ್ರೆಸ್‌ನ ಸ್ವಪಕ್ಷೀಯ ಸದಸ್ಯರ ಕಿತ್ತಾಟ ಕಾರಣವಾಗಿತ್ತು. ಇದರಿಂದಾಗಿ ಪುರಸಭೆ ಉಪಾಧ್ಯಕ್ಷರಾಗಿದ್ದ ಉಷಾ ಸತೀಶ್ ಪ್ರಭಾರ ಅಧ್ಯಕ್ಷರಾಗಿ ಹೆಚ್ಚು ಕಾಲ ಆಡಳಿತ ನಡೆಸಿದರು. ಆದರೆ, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದೆ ಮುಂದೂಡುತ್ತಲೇ ಇದ್ದ ಕಾರಣ ಮಾಜಿ ಅಧ್ಯಕ್ಷ ಎ.ಆರ್.ಅಶೋಕ್ ಹಾಗೂ ಅಕ್ರಂ ಷರೀಫ್ ಮಾತುಕತೆ ನಡೆಸಿ ನ್ಯಾಯಾಲಯದಿಂದ ಮೊಕದ್ದಮೆ ವಾಪಸ್ ಪಡೆಯಲು ತೀರ್ಮಾನಿಸಿದ್ದರು. ಅದರಂತೆ ಎ.ಆರ್.ಅಶೋಕ್ ಮೊಕದ್ದಮೆ ವಾಪಸ್ ಪಡೆದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು.
ಚುನಾವಣೆ ದಿನಾಂಕ ನಿಗದಿಯಾಗುತ್ತಿದಂತೆ ಕಾಂಗ್ರೆಸ್ ಸದಸ್ಯ ಅಕ್ರಂ ಷರೀಫ್, ಮಾಜಿ ಅಧ್ಯಕ್ಷ ಎ.ಆರ್.ಅಶೋಕ್ ನೇತೃತ್ವದಲ್ಲಿ ಕಾಂಗ್ರೆಸ್‌ನ ಕೆಲ ಸದಸ್ಯರೊಂದಿಗೆ ಜೆಡಿಎಸ್, ಬಿಜೆಪಿ ಸದಸ್ಯರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದರು. ಇದರಿಂದ ಕಾಂಗ್ರೆಸ್‌ನ ಇನ್ನೊಂದು ಗುಂಪು ಅಧ್ಯಕ್ಷ ಸ್ಥಾನಕ್ಕಾಗಿ ಇನ್ನಿಲ್ಲದಂತೆ ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಬೆಂಬಲದಿಂದಲೇ ಅಕ್ರಂ ಷರೀಫ್ ಅಧ್ಯಕ್ಷರಾಗುವಂತೆ ಮಾಡುವುದಕ್ಕಾಗಿ ವರಿಷ್ಠರು ವಿಪ್ ಜಾರಿ ಮಾಡಿದ್ದರಿಂದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಎಲ್ಲ ಸದಸ್ಯರು ಸುಮ್ಮನ್ನಾಗಿದ್ದರಿಂದ ಹಾಗೂ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಪಕ್ಷದ ಸದಸ್ಯರ ಬೆಂಬಲದೊಂದಿಗೆ ಸೋಮವಾರ 23ನೇ ವಾರ್ಡಿನ ಸದಸ್ಯ ಅಕ್ರಮ್ ಷರೀಫ್ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಸದಸ್ಯ ಫಯಾಜ್ ಅಹಮದ್ ಅನಾರೋಗ್ಯದ ಕಾರಣ ಸಭೆಗೆ ಆಗಮಿಸಲಿಲ್ಲ. ಅಸಮಾಧಾನಿತ ಕಾಂಗ್ರೆಸ್‌ನ ಎಲ್ಲ ಸದಸ್ಯರು, ಜೆಡಿಎಸ್-ಬಿಜೆಪಿ ಹಾಗೂ ಅಕ್ರಂ ಷರೀಫ್ ಬೆಂಬಲಿತ ಕಾಂಗ್ರೆಸ್ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅಕ್ರಂ ಷರೀಫ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಅಕ್ರಂ ಷರೀಫ್ ಬೆಂಬಲಿಗರು ಪಟಾಕಿ ಸಿಡಿಸಿ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ನಾನು ಪುರಸಭೆ ಅಧ್ಯಕ್ಷನಾಗಿ ಆಯ್ಕೆಯಾಗಲು ಕಾರಣರಾದ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಬಿ.ಶಿವರಾಂ ಸೇರಿದಂತೆ ಎಲ್ಲ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಜೆಡಿಎಸ್-ಬಿಜೆಪಿ ಸದಸ್ಯರು ಸಹ ಸಂಪೂರ್ಣ ಬೆಂಬಲ ನೀಡಿದ್ದಾರೆ. ಎಲ್ಲರ ಸಹಕಾರದೊಂದಿಗೆ ಉತ್ತಮ ಕೆಲಸ ಮಾಡುತ್ತೇನೆ ಎಂದರು.
ಪುರಸಭೆ ಉಪಾಧ್ಯಕ್ಷೆ ಉಷಾ ಸತೀಶ್, ಸದಸ್ಯರಾದ ತೀರ್ಥಕುಮಾರಿ, ರತ್ನಕ್ಕ, ಜಗದೀಶ್, ಸೌಮ್ಯಾ, ಜಮೀಲಾ ತೌಫಿಕ್, ಜಮಾಲೂದ್ದೀನ್, ಪುಟ್ಟಸ್ವಾಮಿ, ಅಶೋಕ್, ಶ್ರೀನಿವಾಸ್, ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ ಇತರರಿದ್ದರು.
ಎ.ಆರ್.ಅಶೋಕ್‌ಗೆ ಅವಕಾಶ ಸಿಗಲಿಲ್ಲ
ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಎ.ಆರ್.ಅಶೋಕ್ ಪುರಸಭೆ ಸದಸ್ಯತ್ವ ರದ್ದಾಗಿದ್ದ ಆದೇಶದ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಬೇಕೆಂದು ಕೆಲ ದಿನಗಳ ಹಿಂದೆ ಮುಖ್ಯಾಧಿಕಾರಿಗೆ ಮನವಿ ನೀಡಿದ್ದರು. ಆದರೆ, ಪುರಸಭೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆಗೂ ಮುನ್ನವೇ ನ್ಯಾಯಾಲಯದ ಆದೇಶ ಕೊಟ್ಟಿದ್ದಿದ್ದರೆ ಅಶೋಕ್‌ಗೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿತ್ತು. ಆದರೆ, ಚುನಾವಣಾಧಿಕಾರಿಗಳು ಅವಕಾಶ ನೀಡದ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದು ನಂತರ ಅಕ್ರಂ ಷರೀಫ್‌ಗೆ ಬೆಂಬಲ ನೀಡಿದರು.