ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. ಸಿಎಂ. ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಡಾ. ಎಚ್.ಸಿ. ಮಹದೇವಪ್ಪ, ಶ್ರೇಯಸ್ ಎಂ. ಪಟೇಲ್, ಎಚ್.ಕೆ. ಸುರೇಶ್, ಡಾ.ಸಿ.ಎನ್.ಬಾಲಕೃಷ್ಣ, ಸಿಮೆಂಟ್ ಮಂಜು ಇತರರಿದ್ದರು. 
ಹಾಸನ

ಹಾಸನದಲ್ಲಿ ಪ್ರವಾಸೋದ್ಯಮಕ್ಕೆ ನೆರವು

ಪ್ರಮುಖ ಮುಖ್ಯಾಂಶಗಳು

  • ಹಾಸನದಲ್ಲಿ ಪ್ರವಾಸೋದ್ಯಮಕ್ಕೆ ನೆರವು
  • ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
  • ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನಾ ಸಮಾರಂಭ
ಹಾಸನ: ರೈತರು, ಬಡವರು, ದಲಿತರು, ಅಲ್ಪಸಂಖ್ಯಾತರು, ಕಾರ್ಮಿಕರ ಪರವಾಗಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ, 50 ಸಾವಿರಕ್ಕೂ ಹೆಚ್ಚಿನ ಕುಟುಂಬಗಳ ಸಂಭ್ರಮದ ಕ್ಷಣವಾಗಿ ಕಂದಾಯ ಇಲಾಖೆಯ ದರಖಾಸ್ತು ಪೋಡಿ, ಪೌತಿ ಖಾತೆ, ಕಂದಾಯ ಗ್ರಾಮ, 94ಸಿ ಹಕ್ಕುಪತ್ರಗಳ ವಿತರಣೆ ಮತ್ತು ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳ ಸಮರ್ಪಣೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಪರವಾಗಿರುವ ಸರ್ಕಾರ ನಮ್ಮದು. ಅಸಮಾನತೆ ತೊಡೆದು ಹಾಕಿ ಸಮಾನತೆಯಿಂದ ಎಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬಂದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
132 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ 166 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ನೂರಾರು ಕೋಟಿ ರೂ.ಗಳ ಸವಲತ್ತು ವಿತರಣೆ ಮಾಡಲಾಗುತ್ತಿದೆ. ಇಲ್ಲಿನ ಸಮಸ್ಯೆಗಳನ್ನು ಅರಿತಿದ್ದು ಅವುಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಅಸಮಾನತೆ ಹೋಗಲಾಡಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇದುವರೆಗೆ ಒಂದು ಲಕ್ಷದ ಎಂಟು ಸಾವಿರದ ನೂರ ಮೂವತ್ತೈದು ಕೋಟಿ ರೂ.ವೆಚ್ಚ ಮಾಡಲಾಗಿದೆ. ಸರ್ಕಾರ ರಚನೆಯಾದ ಒಂದು ವರ್ಷದೊಳಗೆ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವ ನಿಧಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಶಕ್ತಿ ಯೋಜನೆಯಡಿ ಇದುವರೆಗೂ 600 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ ಎಂದು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಪ್ರವಾಸಿ ಸ್ಥಳಗಳಿದ್ದು, ಗೊರೂರಿನ ಹೇಮಾವತಿ ಜಲಾಶಯದ ಕೆಳಭಾಗದಲ್ಲಿ ಉದ್ಯಾನ ನಿರ್ಮಿಸಲು ಪ್ರಸ್ತಾವನೆ ಇದೆ. ಇದನ್ನು ನಿರ್ಮಿಸುವುದರಿಂದ ಪ್ರವಾಸೋದ್ಯಮಕ್ಕೆ ನೆರವಾಗಲಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಇಂದು ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನವಾಗಿದೆ. ಸ್ವಾತಂತ್ರೃ, ಸಮಾನತೆ, ಭ್ರಾತೃತ್ವವವನ್ನು ದೇಶದಲ್ಲಿ ಸ್ಥಾಪನೆ ಮಾಡಿದ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಭೂ ಗ್ಯಾರಂಟಿ ಆರನೇ ಯೋಜನೆ: ಕಂದಾಯ ಇಲಾಖೆಯಲ್ಲಿ ದೊಡ್ಡಕ್ರಾಂತಿ ಮಾಡಿದ್ದಾರೆ. ತಾತ, ಮುತ್ತಾತನ ಕಾಲದಿಂದಲೂ ಬಗೆಹರಿಯದ ಭೂ ಸಮಸ್ಯೆಗಳನ್ನು ಖುದ್ದು ದಾಖಲಾತಿಗಳನ್ನು ಪಡೆದು, ಹೊಸರೂಪವನ್ನು ಕೊಡುವುದರ ಮೂಲಕ ಆರನೇ ಗ್ಯಾರಂಟಿಯಾಗಿ ಭೂಗ್ಯಾರಂಟಿಯನ್ನು ಜನತೆಗೆ ಅರ್ಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಒತ್ತುವರಿ ಮಾಡಿಕೊಂಡವರಿಗೆ ಸಕ್ರಮ ಮಾಡಿ ಉಳುವವರಿಗೆ ಭೂಮಿ ಕೊಡುವ ಕೆಲಸ ಮಾಡಲಾಗುತ್ತಿದೆ. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಲ್ಲಿ ಕೆಲವು ತೊಡಕುಗಳಿವೆ. ಅದನ್ನು ಪರಿಹರಿಸಿ ತುಮಕೂರುವರೆಗೂ ನೀರು ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಜಾರಿಯಾದರೆ ಹಾಸನ, ಮಂಡ್ಯ, ಚಾಮರಾಜನಗರ ಮತ್ತಿತರ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಇದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಭಗವಂತ ಅವಕಾಶ ನೀಡಿದ್ದಾರೆ. ಉತ್ತಮ ಕೆಲಸ ಮಾಡುವ ಮೂಲಕ ಜನರ ಕಲ್ಯಾಣ ಮಾಡಬೇಕು. ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ. ಹಾಸನಕ್ಕೆ ಹೊಸರೂಪ ಕೊಡುವ ಕೆಲಸವಾಗಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಹಾಸನದಲ್ಲಿ 14 ವರ್ಷದಲ್ಲಿ 2444 ರೈತರ ಜಮೀನು ಪೋಡಿ ಮಾಡಲಾಗಿತ್ತು. ಈಗ ಒಂದು ವರ್ಷದಲ್ಲಿ 24,000 ರೈತರ ಜಮೀನನ್ನು ದುರಸ್ತಿ ಕೈಗೊಂಡಿದ್ದೇವೆ. ರಾಜ್ಯದಲ್ಲಿ 8500 ದುರಸ್ತಿ ಆಗಿತ್ತು ಒಂದು ವರ್ಷದೊಳಗೆ 1,51,313 ದುರಸ್ತಿ ಮಾಡಿದ್ದೇವೆ. ರೈತರ ಮನೆ ಬಾಗಿಲಿಗೆ ಹೋಗಿ ದುರಸ್ತಿ ಮಾಡಿಕೊಡಲಾಗಿದೆ ಎಂದು ಹೇಳಿದರು.
ಭೂಮಿ ಎಂಬುದು ಗೊಂದಲದ ಗೂಡಾಗಿದೆ. ವಿವಾದಗಳನ್ನು ಬಗೆಹರಿಸಿ, ಭೂ ಗ್ಯಾರಂಟಿ ಕಡೆಗೆ ಕೊಂಡೊಯ್ಯಲಾಗುತ್ತಿದೆ. ಭೂ ಮಾಲೀಕತ್ವದ ಖಚಿತತೆ ಕೊಡುವ ಕೆಲಸ ಮಾಡಲಾಗುತ್ತಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ಕಾರ್ಯರೂಪಕ್ಕೆ ತರಬೇಕು, ಹೇಮಾವತಿ ನಾಲೆ ಸೇರಿದಂತೆ ಇತರ ನಾಲೆಗಳ ಆಧುನೀಕರಣವಾಗಬೇಕು. ಇದರಿಂದ ರೈತರಿಗೆ ನೆರವಾಗುತ್ತದೆ. ಗೊರೂರು ಹೇಮಾವತಿ ಜಲಾಶಯದ ಕೆಳ ಭಾಗದಲ್ಲಿ ಉದ್ಯಾನ ನಿರ್ಮಾಣ ಮಾಡಿದರೆ ಪ್ರವಾಸೋದ್ಯಮಕ್ಕೆ ಪುಷ್ಟಿ ನೀಡಿದಂತಾಗುತ್ತದೆ. ಗಂಡಸಿ ಹೋಬಳಿಗಳ ಕೆರೆಗಳಿಗೆ ಕಾವೇರಿ ನೀರಾವರಿ ನಿಗಮದಿಂದ ನೀರು ತುಂಬಿಸುವ ಕೆಲಸ ಆಗಬೇಕು. ಮಾನವ-ಪ್ರಾಣಿ ಸಂಘರ್ಷ ದಿನೇ ದಿನೆ ಹೆಚ್ಚಾಗುತ್ತಿದೆ. ರೈತರು ತೊಂದರೆಗೆ ಸಿಲುಕುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಶತಮಾನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸವನ್ನು ಮಾಡುವುದರ ಮೂಲಕ ರೈತರಿಗೆ ಭೂ ದಾಖಲೆಗಳನ್ನು ಒದಗಿಸುವ ಮೂಲಕ ಕಂದಾಯ ಇಲಾಖೆ ಕ್ರಾಂತಿ ಮಾಡಿದೆ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳನ್ನು ಕಂದಾಯ ಇಲಾಖೆ ಮಾಡುತ್ತಿದೆ. ಇದರಿಂದ ಇಡೀ ರಾಜ್ಯದ ಜನತೆಗೆ ಲಾಭ ದೊರಕುತ್ತಿದೆ. ಹೊಸ ಕಾಮಗಾರಿಗಳನ್ನು ನಿಲ್ಲಿಸಿ ಹಳೆಯ ನಾಲೆಗಳ ದುರಸ್ತಿಗೆ ಹೆಚ್ಚು ಒತ್ತು ನೀಡಿದರೆ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ, ಸಿಮೆಂಟ್ ಮಂಜು ಮಾತನಾಡಿದರು. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವ ಜಮೀರ್ ಅಹಮದ್‌ಖಾನ್, ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಎಚ್.ಕೆ. ಸುರೇಶ್, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೋಲೀಸ್ ವರೀಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಆರ್ ಪೂರ್ಣಿಮಾ, ಹಿಂದಿನ ಜಿಲ್ಲಾಧಿಕಾರಿ ಸತ್ಯಭಾಮಾ ಇತರರು ಇದ್ದರು.