ಚನ್ನರಾಯಪಟ್ಟಣದ ಜ್ಞಾನಸಾಗರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ಅಳವಡಿಸಿರುವ ಐರಿಸ್ ಕೃತಕ ಬುದ್ಧಿಮತ್ತೆಯ ರೋಬಾಟ್ ಶಿಕ್ಷಕಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಚ್.ಸತೀಶ್ ಅನಾವರಣಗೊಳಿಸಿದರು. ಡಾ.ಕೆ.ನಾಗೇಶ್, ಡಾ.ಭಾರತಿ ನಾಗೇಶ್, ಸುಜಾ ಫಿಲಿಪ್, ಜಿ.ಕೆ.ಮಂಜುನಾಥ್ ಇದ್ದರು.
- ವಿದ್ಯಾರ್ಥಿಗಳ ಕಲಿಕೆಗೆ ಎಐ ತಂತ್ರಜ್ಞಾನ ಸಹಕಾರಿ
- ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ನಾಗೇಶ್ ಅಭಿಮತ
ಚನ್ನರಾಯಪಟ್ಟಣ: ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವು ವಿದ್ಯಾರ್ಥಿಗಳ ಕಲಿಕಾ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನವೀನ ಶಿಕ್ಷಣ ಪಡೆಯಲು ಅನುಕೂವಾಗಲಿದೆ ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ನಾಗೇಶ್ ತಿಳಿಸಿದರು.
ಪಟ್ಟಣದ ಜ್ಞಾನಸಾಗರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನೂತನವಾಗಿ ಅಳವಡಿಸಿರುವ ಐರಿಸ್ ಕೃತಕ ಬುದ್ಧಿಮತ್ತೆಯ ರೋಬಾಟ್ ಶಿಕ್ಷಕಿಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ವಲಯದಲ್ಲಿ ಕ್ರಾಂತಿ ಮೂಡಿಸುವ ಕಾಲ ಹತ್ತಿರವಾಗುತ್ತಿದೆ. ಮಾಹಿತಿ ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರದಲ್ಲಿ ಈಗ ಹೊಸ ಸೇರ್ಪಡೆ ಐರಿಸ್ ಕೃತಕ ಬುದ್ಧಿಮತ್ತೆ ಶಿಕ್ಷಕಿ ಆಗಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಐರಿಸ್ ರೋಬಾಟ್ ಶಿಕ್ಷಕಿಯನ್ನು ಜಿಲ್ಲೆಯಲ್ಲೇ ಮೊಟ್ಟ ಮೊದಲು ನಮ್ಮ ಶಾಲೆಗೆ ಅಳವಡಿಸಲಾಗಿದ್ದು, ಇದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು.
ಐರಿಸ್ ಕೃತಕ ಬುದ್ಧಿಮತ್ತೆಯ ಶಿಕ್ಷಕಿ ಧ್ವನಿ ನೆರವು, ಸಂವಾದಾತ್ಮಕ ಕಲಿಕೆ ಮಾಡ್ಯೂಲ್‌ಗಳು, ಮ್ಯಾನಿಪ್ಯುಲೇಷನ್ ಸಾಮರ್ಥ್ಯಗಳು ಮತ್ತು ಚಲನಶೀಲತೆಯನ್ನು ಒಳಗೊಂಡಿದೆ. ಯಾವುದೇ ಮಗು ಶಿಕ್ಷಣಕ್ಕೆ ಸಂಬಂಧಿಸಿದ ಏನೇ ಪ್ರಶ್ನೆ ಕೇಳಿದರೂ ಕೃತಕ ಬುದ್ಧಿಮತ್ತೆಯ ಶಿಕ್ಷಕಿ ಅದಕ್ಕೆ ಸಮರ್ಕವಾಗಿ ಉತ್ತರ ಹೇಳುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಚ್.ಸತೀಶ್ ಮಾತನಾಡಿ, ಸದಾ ಹೊಸತನ, ಪ್ರಯೋಗಶೀಲತೆಯ ಮೂಲಕ ಡಿಜಿಟಲ್ ವ್ಯವಸ್ಥೆಗಳ ಬಳಕೆ ಮಾಡಿ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಶಾಲೆಯ ಆಡಳಿತ ಮಂಡಳಿಯ ಪ್ರಯತ್ನ ಶ್ಲಾಘನೀಯವಾಗಿದೆ. ಇದು ಕೇವಲ ಪುಸ್ತಕದ ಜ್ಞಾನವನ್ನು ಮೀರಿ, ಜಾಗತಿಕ ಮಟ್ಟದಲ್ಲಿ ಯಶಸ್ಸು ಗಳಿಸಲು ಮತ್ತು ಭವಿಷ್ಯದ ಉದ್ಯೋಗಾವಕಾಶಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಡಾ.ಭಾರತೀಯ ನಾಗೇಶ್, ಡೀನ್ ಡಾ.ಸುಜಾ ಫಿಲಿಪ್, ಜಿಲ್ಲಾ ಯೂಥ್ ಕಾಂಗ್ರೆಸ್ ಕಾರ್ಯದರ್ಶಿ ಜೆ.ಕೆ.ಮಂಜುನಾಥ್ ಸೇರಿದಂತೆ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.