ಅರಸೀಕೆರೆ ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಸಂತೋಷ್‌ಕುಮಾರ್, ಧರ್ಮಶೇಖರ್, ಪರಶಿವಮೂರ್ತಿ, ಮೋಹನ್‌ಕುಮಾರ್, ಜಯಣ್ಣ ಇದ್ದರು. 
ಹಾಸನ

ಸಮಾನತೆ, ಸಹೋದರತ್ವ ಗುಣ ಅಳವಡಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶಿವಲಿಂಗೇಗೌಡ ಹೇಳಿಕೆ
ಅರಸೀಕೆರೆ: ಸಂವಿಧಾನದ ಆಶಯಗಳನ್ನು ಗೌರವಿಸುವ ಮತ್ತು ಪಾಲಿಸುವ ಹೊಣೆಗಾರಿಕೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಸರ್ಕಾರಿ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳ ಪೈಕಿ ನಮ್ಮ ದೇಶಕ್ಕೆ ಅಗ್ರಸ್ಥಾನವಿದೆ ಎಂಬುದೇ ಹೆಮ್ಮೆಯ ಸಂಗತಿ. ಜತೆಗೆ ಲಿಖಿತ ರೂಪದ ಕಾನೂನುಗಳನ್ನು ಜಾರಿಗೊಳಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಭಾರತೀಯರಾದ ನಾವುಗಳು ಸಮಾನತೆ, ಸಹೋದರತ್ವ, ಭ್ರಾತೃತ್ವ ಹಾಗೂ ಸಹಬಾಳ್ವೆ ಗುಣಗಳನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರವೇ ಅಂಬೇಡ್ಕರ್ ಸಂವಿಧಾನಕ್ಕೆ ನಿಜವಾದ ಗೌರವ ನೀಡಿದಂತಾಗಲಿದೆ ಎಂದು ಹೇಳಿದರು.
ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನ ಓದಿ ಅರ್ಥೈಸಿಕೊಂಡು ನಡೆದರೆ ಮಾತ್ರವೇ ನೇತಾರರಿಗೆ ನಿಜವಾದ ಗೌರವ ನೀಡಿದಂತಾಗಲಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಬಿಇಒ ಮೋಹನ್‌ಕುಮಾರ್ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯಣ್ಣ, ರಾಯಲ್ ಕಾಮರ್ಸ್ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಇತರರಿದ್ದರು.