ನಗರದ ಮಹಾವೀರ ವೃತ್ತದಲ್ಲಿ ವೀರಶೈವ ಲಿಂಗಾಯತ ವೇದಿಕೆ ರಾಜ್ಯ ಸಮಿತಿಯಿಂದ ಅನ್ನದಾಸೋಹ, ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
- ಜೀವನದಲ್ಲಿ ಶರಣರ ಸಂದೇಶ ಅಳವಡಿಸಿಕೊಳ್ಳಿ
- ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಲಹೆ
ಹಾಸನ: ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಅಂಗವಾಗಿ ಸೋಮವಾರ ನಗರದ ಮಹಾವೀರ ವೃತ್ತದಲ್ಲಿ ವೀರಶೈವ-ಲಿಂಗಾಯತ ವೇದಿಕೆಯ ರಾಜ್ಯ ಸಮಿತಿಯಿಂದ ಅನ್ನದಾಸೋಹ, ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಅನ್ನದಾಸೋಹ, ಜ್ಞಾನದಾಸೋಹ ಮತ್ತು ಭಕ್ತಿ ದಾಸೋಹ ಎಂಬ ತ್ರಿವಿಧ ದಾಸೋಹದ ತತ್ವಗಳು ಸಾಮಾಜಿಕ ಸಮಾನತೆ, ಕಾಯಕದ ಮಹತ್ವ ಮತ್ತು ನಿಸ್ವಾರ್ಥ ಸೇವೆಯನ್ನು ಸಾರುತ್ತವೆ ಎಂದರು.
ಕಾಯಕವೇ ಕೈಲಾಸ, ದಾಸೋಹವೇ ಮುಕ್ತಿಯ ದಾರಿ ಎಂಬ ಶರಣರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ಇಂತಹ ಪುಣ್ಯ ಸ್ಮರಣೆಗಳು ಸಾರ್ಥಕವಾಗುತ್ತವೆ ಎಂದರು.
ವೀರಶೈವ ಲಿಂಗಾಯತ ಮಹಾ ವೇದಿಕೆಯ ರಾಜ್ಯ ಸಮಿತಿ ಸದಸ್ಯ ಬಿ.ಆರ್. ವಸಂತಕುಮಾರ್ ಮಾತನಾಡಿ, ಸಮಾಜದ ಎಲ್ಲ ವರ್ಗಗಳಿಗೂ ಸೇವೆಯ ಸಂದೇಶ ತಲುಪಿಸುವ ಉದ್ದೇಶದಿಂದ ಶಿವಕುಮಾರ ಶ್ರೀಗಳ 7ನೇ ಪುಣ್ಯ ಸಂಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ವೀರಶೈವ-ಲಿಂಗಾಯತ ಮಹಾಸಭಾ ಮುಖಂಡ ಪ್ರಶಾಂತ್ ಕಲ್ಲೂರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ದಾಸೋಹ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ನಗರದ ಹೇಮಾವತಿ ಪ್ರತಿಮೆಯಿಂದ ಕುಂಭಕಳಸ, ಮಂಗಳವಾದ್ಯಗಳೊಂದಿಗೆ ಸ್ವಾಮೀಜಿಗಳು ಹಾಗೂ ಗಣ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಜಿಲ್ಲೆಯ ವಿವಿಧ ಮಠದ ಸ್ವಾಮೀಜಿಗಳಾದ ವಿಜಯಕುಮಾರ್ ಸ್ವಾಮಿಜಿ, ಕಲ್ಯಾಣ ಸ್ವಾಮಿಜಿ, ಶ್ರೀ ಸಂಗಮೇಶ್ವರ ಸ್ವಾಮೀಜಿ, ಮಹಂತ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಜಯದೇವ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಜಯದೇವಿ ತಾಯಿ, ಚಿನ್ಮಯಿ ಮಾತಾಜಿ, ಸಿಮೆಂಟ್ ಮಂಜು, ಸಿದ್ದೇಶ್ ನಾಗೇಂದ್ರ, ಕಟ್ಟಾಯ ಶಿವಕುಮಾರ್, ಕಂಚಮಾರನಹಳ್ಳಿ ಕಾಂತರಾಜ್, ಎಸ್.ಎಸ್.ಪ್ರಸನ್ನ ಧರ್ಮ, ರೇವಣ್ಣ, ತಮ್ಮಯ್ಯ, ಯು.ಎಸ್. ಬಸವರಾಜು, ವಿಜಯಣ್ಣ, ತೇಜುಮೂರ್ತಿ, ಅರ್.ಬಿ.ಸುರೇಶ್, ಎಂ.ಎಸ್.ಮಹೇಶ್, ಪಂಚಾಕ್ಷರಿ, ಎಂ.ಎನ್.ಕುಮಾರ ಸ್ವಾಮಿ, ಅವಿನಾಶ್, ದೇವರಾಜು, ಅಜಿತ್, ಕಟ್ಟೆಗದ್ದೆ ನಾಗರಾಜ್, ದೇವರಾಜ್, ಅಪ್ಪಣ್ಣ ಗೌಡ ಇತರರು ಇದ್ದರು.