ಹಾಸನ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೈಸರ್ಗಿಕ ಕೃಷಿಕ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ್ ದೇಶಪಾಂಡೆ, ಡಾ.ಎಂ.ಸಿ.ರಂಗಸ್ವಾಮಿ, ಎಚ್.ಆರ್. ಯೋಗೇಶ್, ಎ.ಎಸ್. ಕೋಕಿಲಾ ಹಾಗೂ ಬಿ.ಎನ್.ಪ್ರಭಾಕರ್, ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಆರ್.ಕೆ. ರಮೇಶ್ ಇತರರಿದ್ದರು. 
ಹಾಸನ

ಪ್ರಕೃತಿ ಆಧಾರಿತ ವ್ಯವಸಾಯ ಪದ್ಧತಿ ಅಳವಡಿಸಿಕೊಳ್ಳಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಪ್ರಕೃತಿ ಆಧಾರಿತ ವ್ಯವಸಾಯ ಪದ್ಧತಿ ಅಳವಡಿಸಿಕೊಳ್ಳಿ
  • ಕೃಷಿಕ ಚಂದ್ರಶೇಖರ್‌ಸಲಹೆ
  • ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆ
ಹಾಸನ: ರೈತರು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆಯಿಂದ ದೂರವಿದ್ದು, ಪ್ರಕೃತಿ ಆಧಾರಿತ ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಮಾತ್ರ ಕೃಷಿ ಸುಸ್ಥಿರವಾಗಲು ಸಾಧ್ಯ ಎಂದು ಕೃಷಿ ಪಂಡಿತ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೈಸರ್ಗಿಕ ಕೃಷಿಕ ಚಂದ್ರಶೇಖರ್ ಹೇಳಿದರು.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿ, ರೈತರು ಸ್ಥಳೀಯ ಜಾನುವಾರುಗಳನ್ನು, ವಿಶೇಷವಾಗಿ ದೇಸಿ ಹಸುಗಳನ್ನು ಬಳಸಿಕೊಂಡು ಕೃಷಿ ಕೈಗೊಳ್ಳುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಹಾಗೂ ಕೃಷಿ ಪರಿಕರಗಳ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ಸ್ವಾವಲಂಬಿಗಳಾಗಬೇಕಾದ ಅಗತ್ಯವಿದೆ. ಕೃಷಿ ತ್ಯಾಜ್ಯಗಳನ್ನು ಬಳಸಿಕೊಂಡು ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ, ಹಸುವಿನ ಗೊಬ್ಬರ, ಜೀವಾಮೃತ ಸೇರಿದಂತೆ ಸಸ್ಯ ಹಾಗೂ ಪ್ರಾಣಿಜನ್ಯ ಕೀಟನಾಶಕ ತಯಾರಿಸಿ ಬಳಸಬೇಕು ಎಂದು ಸಲಹೆ ನೀಡಿದರು.
ಬೀಜ ಸಂಸ್ಕರಣೆ ಮೂಲಕ ರೈತರು ಸ್ವಂತ ಬೀಜೋತ್ಪಾದನೆ ಮಾಡಿಕೊಂಡು ವಿಷಮುಕ್ತ ಹಾಗೂ ಆರೋಗ್ಯಕರ ಆಹಾರ ಉತ್ಪನ್ನಗಳನ್ನು ಸಮಾಜಕ್ಕೆ ನೀಡಬೇಕು. ನೈಸರ್ಗಿಕ ಕೃಷಿಯಿಂದ ಪರಿಸರ ಸಂರಕ್ಷಣೆ ಜತೆಗೆ ರೈತರ ಆದಾಯವೂ ಹೆಚ್ಚಲಿದೆ ಎಂದು ಹೇಳಿದರು. ಕೃಷಿ ವಿಜ್ಞಾನ ಕೇಂದ್ರ ಕಂದಲಿ ಕೃಷಿ ಇಂಜಿನಿಯರಿಂಗ್ ವಿಭಾಗದ ಶ್ರೀನಿವಾಸ್ ದೇಶಪಾಂಡೆ ಮಾತನಾಡಿ, ಕೃಷಿಯಲ್ಲಿ ಕೃತಕಬುದ್ಧಿ ಮತ್ತೆಯ ಬಳಕೆ ಕುರಿತು ಮಾಹಿತಿ ನೀಡಿದರು.
ಉತ್ತಮ ಮಳೆಯಾಗುವ ನಿರೀಕ್ಷೆ:
ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಶೇ.30 ರಷ್ಟು ಮಳೆ ಕೊರತೆ ಕಂಡುಬಂದಿದ್ದು, ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದರು.
ಯೂರಿಯಾ ಹಾಗೂ ಡಿಎಪಿ ಗೊಬ್ಬರಗಳನ್ನು ಸಮತೋಲನವಾಗಿ ಬಳಸುವ ಜತೆಗೆ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು. ಮುಸುಕಿನ ಜೋಳದ 391 ಲಾಟ್ ತಳಿಗಳ ಬೀಜಗಳನ್ನು ಬಿಳಿಸುಳಿ ರೋಗಾಣು ಇಲ್ಲವೆಂದು ಪರೀಕ್ಷಿಸಲಾಗಿದ್ದು, ಮುಂಗಾರು ಹಂಗಾಮಿಗೆ ಅಗತ್ಯ ದಾಸ್ತಾನು ಮಾಡಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಾ.ಎಂ.ಸಿ.ರಂಗಸ್ವಾಮಿ ಮಾತನಾಡಿ, ದೇಶಾದ್ಯಂತ ಗೊಬ್ಬರದ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆ, ರೈತರು ನೈಸರ್ಗಿಕ ಹಾಗೂ ಸಾವಯವ ಕೃಷಿಯತ್ತ ಹೆಚ್ಚಿನ ಒಲವು ತೋರಬೇಕು ಎಂದು ಕರೆ ನೀಡಿದರು. ಜೀವಾಮೃತದಲ್ಲಿ ಅಪಾರ ಪ್ರಮಾಣದ ಉಪಕಾರಿ ಜೀವಾಣುಗಳಿದ್ದು, ಅದನ್ನು ಮಣ್ಣಿಗೆ ಸೇರಿಸುವುದರಿಂದ ಫಲವತ್ತತೆ ಹೆಚ್ಚುತ್ತದೆ. ಕೃಷಿಯಲ್ಲಿ ಹೊರರಾಜ್ಯದ ಕಾರ್ಮಿಕರ ಅವಲಂಬನೆ ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ ಹಾಗೂ ರೋಬೋಟಿಕ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ತೋಟಗಾರಿಕೆ ಜಂಟಿ ನಿರ್ದೇಶಕ ಎಚ್.ಆರ್.ಯೋಗೇಶ್ , ಉಪ ಕೃಷಿ ನಿರ್ದೇಶಕರಾದ ಎ.ಎಸ್. ಕೋಕಿಲಾ ಹಾಗೂ ಬಿ.ಎನ್.ಪ್ರಭಾಕರ್, ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಆರ್.ಕೆ. ರಮೇಶ್, ರೇಷ್ಮೆ ವಿಸ್ತರಣಾಧಿಕಾರಿ ನಿಶ್ಚಿತ, ಸಹಕಾರ ಸಂಘಗಳ ಉಪನಿಬಂಧಕ ಕೆ.ಕೆ.ಕಿರಣ್ ಕುಮಾರ್ ಇತರರಿದ್ದರು.