ಹಾಸನ ನಗರದ ವಿದ್ಯಾನಗರದಲ್ಲಿ ನಿವೇಶನದ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ಹಾಗೂ ದೇವರಾಜು ನಡುವೆ ಉಂಟಾಗಿರುವ ವಿವಾದ ಶನಿವಾರ ಬೆಳಗ್ಗೆಯೂ ವಾಗ್ವಾದ-ಜಟಾಪಟಿಗೆ ಕಾರಣವಾಯಿತು.  
ಹಾಸನ

ನಟ ಯಶ್ ತಾಯಿ ಪುಷ್ಪಾ-ದೇವರಾಜು ನಡುವೆ ಜಟಾಪಟಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ನಟ ಯಶ್ ತಾಯಿ ಪುಷ್ಪಾ-ದೇವರಾಜು ನಡುವೆ ಜಟಾಪಟಿ
  • ನಿವೇಶನ ವಿಚಾರವಾಗಿ ಮಾತಿನ ಚಕಮಕಿ
ಹಾಸನ: ನಗರದ ವಿದ್ಯಾನಗರದಲ್ಲಿ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ಹಾಗೂ ದೇವರಾಜು ಅವರ ನಡುವೆ ಉಂಟಾಗಿರುವ ವಿವಾದ ವಾಗ್ವಾದ-ಜಟಾಪಟಿಗೆ ಕಾರಣವಾಗಿದೆ.
ಶನಿವಾರ ಬೆಳಗ್ಗೆ ಸಹ ಜಟಾಪಟಿ ಮುಂದುವರಿದಿದ್ದು. ನಿವೇಶನ ವಿಚಾರವಾಗಿ ಪುಷ್ಪಾ ಮತ್ತು ಜಿಪಿಎ ಹೋಲ್ಡರ್ ದೇವರಾಜು ನಡುವಿನ ತೀವ್ರ ಮಾತಿನ ಚಕಮಕಿ ನಡೆಯಿತು. ನಿವೇಶನ ಬಳಿ ಪುಷ್ಪಾ ಅವರು ಆಗಮಿಸಿದ ವೇಲೆ ಜಿಪಿಎ ಹೋಲ್ಡರ್ ದೇವರಾಜು ಕೂಡ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ನಿವೇಶನದ ನಿಜವಾದ ಮಾಲೀಕತ್ವ ಮತ್ತು ದಾಖಲೆಗಳ ಬಗ್ಗೆ ಪುಷ್ಪಾ ಅವರು ಪ್ರಶ್ನೆ ಎತ್ತಿದ್ದು, ನಿವೇಶನದ ಅಧಿಕೃತ ದಾಖಲೆ ತೋರಿಸಿ ಎಂದು ಒತ್ತಾಯಿಸಿದರು.
ದಾಖಲೆ ವಿಚಾರವಾಗಿ ಆರಂಭವಾದ ಮಾತು ಕೆಲವೇ ಕ್ಷಣಗಳಲ್ಲಿ ವಾಗ್ವಾದಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಪುಷ್ಪಾ ಸಿಟ್ಟಿನಿಂದ, ನಾನು ಸೆಲೆಬ್ರಿಟಿಯ ತಾಯಿ ಎಂಬ ಕಾರಣಕ್ಕೆ ಇಲ್ಲಿಗೆ ಬಂದಿಲ್ಲ. ನಾನು ಇಲ್ಲಿಯೇ ಹುಟ್ಟಿ ಬೆಳೆದವಳು. ನನ್ನ ಹಕ್ಕುಗಳಿಗಾಗಿ ನಿಲ್ಲುತ್ತಿದ್ದೇನೆ. ಇನ್ನು ಮುಂದೆ ಈ ನಿವೇಶನದೊಳಗೆ ಕಾಲಿಡಬಾರದು ಎಂದು ದೇವರಾಜುಗೆ ಎಚ್ಚರಿಕೆ ನೀಡಿದರು.
ದೇವರಾಜು ಮಾತನಾಡಿ, ಈ ರೀತಿ ಮಾತನಾಡುವುದು ಸರಿಯಲ್ಲ. ಕಾನೂನು ಪ್ರಕಾರವೇ ಎಲ್ಲವೂ ನಡೆಯಬೇಕು ಎಂದು ವಾದಿಸಿದರು. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಇದರಿಂದ ಸಿಟ್ಟಾದ ಪುಷ್ಪಾ ಅವರು, ರೌಡಿಗಳನ್ನು ಕರೆದುಕೊಂಡು ರೌಡಿಸಂ ಮಾಡ್ತಿಯಾ, ಈ ವಿಚಾರವಾಗಿ ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇನೆ. ಇನ್ನು ಮುಂದೆ ಇಲ್ಲಿಗೆ ಬಂದರೆ ಸುಮ್ಮನಿರಲ್ಲ ಎಂದು ಗುಡುಗಿದರು. ಕೆಲವೇ ದಿನಗಳಲ್ಲಿ ಮತ್ತೆ ಕಾಂಪೌಂಡ್ ಹಾಕುವುದಾಗಿ ಪುಷ್ಪಾ ಹೇಳಿದರು.
ಈ ಸಮಯದಲ್ಲಿ ಸುತ್ತಮುತ್ತಲ ನಿವಾಸಿಗಳು ಹಾಗೂ ಸಾರ್ವಜನಿಕರು ಜಮಾಯಿಸಿದ್ದು, ವಿದ್ಯಾನಗರ ಬಡಾವಣೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಿದರು.
ಯಾರು ನಿವೇಶನದ ನಿಜವಾದ ಹಕ್ಕುದಾರರು, ಜಿಪಿಎ ಆಧಾರದ ಮೇಲೆ ದೇವರಾಜು ಅವರಿಗೆ ಇರುವ ಅಧಿಕಾರ ಎಷ್ಟರ ಮಟ್ಟಿಗೆ ಮಾನ್ಯ, ದಾಖಲೆಗಳ ಸತ್ಯಾಸತ್ಯತೆ ಏನು ಎಂದು ಸ್ಪಷ್ಟವಾಗಿಲ್ಲ. ಈ ಕಾರಣದಿಂದಾಗಿ ವಿವಾದ ಗಂಭೀರ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಈ ನಡುವೆ ಜಟಾಪಟಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಾಗದ ಜಿಪಿಎ ಹೋಲ್ಡರ್ ದೇವರಾಜು ಜ.28ರಂದು ನೀಡಿದ ದೂರಿನ ಮೇರೆಗೆ ಬಡಾವಣೆ ಠಾಣೆಯಲ್ಲಿ ಪುಷ್ಪಾ ಕಡೆಯ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಚ್.ಆರ್.ನಟರಾಜ್, ಮಲ್ಲೇಶ್, ರಾಜು, ದೇವರಾಜೇಗೌಡ ಮತ್ತು ದುರ್ಗಾ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ.