ಹಾಸನದ ಕವಿಪ್ರನಿನಿ ಪ್ರಸರಣ ಭವನದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋದಿಂದ ಕೈಗಾರಿಕೆಗಳು, ಕಾಫಿ ಬೆಳೆಗಾರರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಭೆ ಆಯೋಜಿಸಲಾಗಿತ್ತು. ಪಿ.ರವಿಕುಮಾರ್, ಎಚ್.ಕೆ.ಜಗದೀಶ್, ಜಾವೇದ್ ಅಕ್ತರ್, ತಾಂತ್ರಿಕ ನಿರ್ದೇಶಕ ಶ್ರೀನಿವಾಸಪ್ಪ, ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್. ಲೋಕೇಶ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಎ.ಎ. ಸುನೀಲ್ ಕುಮಾರ್ ಸೆಸ್ಕ್ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಇದ್ದರು. 
ಹಾಸನ

ವಿದ್ಯುತ್ ಸಂಬಂಧಿ ಸಮಸ್ಯೆ ಪರಿಹಾರಕ್ಕೆ ಕ್ರಮ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ಸಂಬಂಧಿ ಸಮಸ್ಯೆ ಪರಿಹಾರಕ್ಕೆ ಕ್ರಮ
  • ವಿದ್ಯುಚ್ಛಕ್ತಿ ಆಯೋಗದ ಅಧ್ಯಕ್ಷರ ಭರವಸೆ
  • ಕಾಫಿ ಬೆಳೆಗಾರರು, ರೈತ ಮುಖಂಡರೊಂದಿಗೆ ಸಭೆ

ಹಾಸನ:

ಕಾಫಿ ಬೆಳೆಗಾರರು, ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆಯೋಗದ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು, ಉಳಿದ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ಹೇಳಿದರು.

ಹಾಸನದ ಕವಿಪ್ರನಿನಿ ಪ್ರಸರಣ ಭವನದಲ್ಲಿ ಶುಕ್ರವಾರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ ಕೈಗಾರಿಕೆಗಳು, ಕಾಫಿ ಬೆಳೆಗಾರರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದವರು.

ಪ್ರಾರಂಭದಲ್ಲಿ ಕಾಫಿ ಬೆಳೆಗಾರರ ಒಕ್ಕೂಟದ ಪ್ರತಿನಿಧಿಗಳು, ಕೈಗಾರಿಕೆಗಳ ಮುಖ್ಯಸ್ಥರು ಹಾಗೂ ರೈತ ಸಂಘಟನೆ ಪ್ರಮುಖರು, ಡಿಬಿಟಿ ಯೋಜನೆ ಅನುಷ್ಠಾನ, ಸೇವಾ ಸಿಂಧು ತಾಂತ್ರಿಕ ದೋಷ, ಮಿಶ್ರ ಬೆಳೆಗಾರರ ನೋಂದಣಿ ಸಮಸ್ಯೆ, ಬಳಕೆಗೆ ಅನುಗುಣವಾಗಿ ವಿದ್ಯುತ್ ಶುಲ್ಕ ವಿಧಿಸುವುದು, 10 ಎಚ್‌ಪಿ ಒಳಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಬಡ್ಡಿ ಹಾಗೂ ಬಾಕಿ ಮನ್ನಾ, ಮೀಟರ್ ಅಳವಡಿಕೆ ವಿಳಂಬ, ಮಲೆನಾಡು ಭಾಗದಲ್ಲಿ ವಿದ್ಯುತ್ ವ್ಯತ್ಯಯ, ಕಾಡು ಪ್ರಾಣಿಗಳ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿ, ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.
ಕೈಗಾರಿಕೆಗಳ ಸಮಸ್ಯೆ ಹಾಸನ ಜಿಲ್ಲೆಗೆ ಸೀಮಿತವಾಗಿಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲಿದೆ, ಕೈಗಾರಿಕೆಗಳಿಗೆ ವಿದ್ಯುತ್ ಕಡಿತವಾದರೆ ಅವರಿಗೆ ಮಾತ್ರವಲ್ಲ, ಇಲಾಖೆಯ ಆದಾಯಕ್ಕೂ ಹೊಡೆತ ಬೀಳುತ್ತದೆ. ಆದ್ದರಿಂದ ಅವರ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನೂ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಮುರಿಯುವುದು ಸಾಮಾನ್ಯ ಸಂಗತಿ ಆಗಿದೆ. ಆದರೆ, ಕೆಲವು ಕಡೆಗಳಲ್ಲಿ ವಾಹನಗಳ ಡಿಕ್ಕಿಯಿಂದ ವಿದ್ಯುತ್ ಕಂಬಗಳು ಹಾನಿಯಾದಲ್ಲಿ, ಅವುಗಳನ್ನು ಶೀಘ್ರವಾಗಿ ಸರಿಪಡಿಸಲು ನಿರ್ವಹಣಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮಾಡಿ ದುರಸ್ತಿ ಮಾಡಬೇಕೆಂದು ಸೂಚಿಸಿದ ಅವರು, ಸಭೆಯಲ್ಲಿ ತಿಳಿಸಲಾಗಿರುವ ಸಮಸ್ಯೆಗಳನ್ನು ಪರಿಶೀಲಿಸಲಿದ್ದು, ಆಯೋಗದ ವ್ಯಾಪ್ತಿಯಲ್ಲಿ ಬಗೆಹರಿಸಲು ಸಾಧ್ಯವಾಗುವ ಸಮಸ್ಯೆಗಳಿಗೆ ತಕ್ಷಣ ಕ್ರಮವಹಿಸಲಾಗುವುದು ಹಾಗೂ ಉಳಿದ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕೆಇಆರ್‌ಸಿ ಸದಸ್ಯ ಎಚ್.ಕೆ.ಜಗದೀಶ್ ಮಾತನಾಡಿ, ಇಂದಿನ ಸಭೆಯಲ್ಲಿ ಕೆಲವು ಪ್ರಮುಖ ತೊಂದರೆಗಳನ್ನು ಆಯೋಗದ ಗಮನಕ್ಕೆ ತರಲಾಗಿದೆ. ಆಯೋಗದ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಜತೆಗೆ ಸರ್ಕಾರ ಹಾಗೂ ಸೆಸ್ಕ್ ಮಟ್ಟದಲ್ಲಿ ಬಗೆಹರಿಸಬೇಕಾದ ವಿಷಯಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು ಎಂದರು.
ಸಭೆಯಲ್ಲಿ ಬಂದ ಉತ್ತಮ ಸಲಹೆಗಳನ್ನು ಆಯೋಗದ ಅಧ್ಯಕ್ಷರು ಸೂಕ್ಷ್ಮವಾಗಿ ಪರಿಶೀಲಿಸಲಿದ್ದು, ಕಾನೂನಿನ ಚೌಕಟ್ಟಿನೊಳಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.
ಆಯೋಗದ ಸದಸ್ಯ ಜಾವೇದ್ ಅಕ್ತರ್, ತಾಂತ್ರಿಕ ನಿರ್ದೇಶಕ ಶ್ರೀನಿವಾಸಪ್ಪ, ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್. ಲೋಕೇಶ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಎ.ಎ. ಸುನೀಲ್ ಕುಮಾರ್ ಸೆಸ್ಕ್ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಇದ್ದರು.