ಹಾಸನ ನಗರದ ಎಪಿಎಂಸಿ ಆವರಣದಲ್ಲಿರುವ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರಕ್ಕೆ ಕೆ.ಎಸ್ ಲತಾ ಕುಮಾರಿ ಭೇಟಿ ನೀಡಿ ಪರಿಶೀಲಿಸಿದರು. 
ಹಾಸನ

ರಾಗಿ ಖರೀದಿಯಲ್ಲಿ ಅಕ್ರಮ ನಡೆಯದಂತೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ರಾಗಿ ಖರೀದಿಯಲ್ಲಿ ಅಕ್ರಮ ನಡೆಯದಂತೆ ಕ್ರಮ
  • ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಭರವಸೆ
  • ರಾಗಿ ಖರೀದಿ ಕೇಂದ್ರಕ್ಕೆ ಭೇಟಿ, ಪರಿಶೀಲನೆ
ಹಾಸನ: ನಗರದ ಎಪಿಎಂಸಿ ಆವರಣದಲ್ಲಿರುವ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಸೋಮವಾರ ಭೇಟಿ ನೀಡಿ ರಾಗಿ ಗುಣಮಟ್ಟದ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ 26 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆಲೂರು ಹಾಗೂ ಸಕಲೇಶಪುರ ಕೇಂದ್ರ ಹೊರತು ಪಡಿಸಿ ಇತರ ಎಲ್ಲ ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. ಅರಸೀಕೆರೆ ತಾಲೂಕಿನಲ್ಲಿ 10 ಕೇಂದ್ರಗಳು ಹಾಗೂ ಇತರ ತಾಲೂಕುಗಳಲ್ಲಿ 2-3 ಕೇಂದ್ರ ತೆರೆಯಲಾಗಿದೆ. ತಿಂಗಳ ಕೊನೆಯವರೆಗೂ ಖರೀದಿ ಮಾಡಲಾಗುತ್ತದೆ. ರಾಗಿಯ ಖರೀದಿ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದು ಹಾಸನ ತಾಲೂಕಿನ ಖರೀದಿ ಕೇಂದ್ರ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದರು.
ರಾಗಿಯನ್ನು ಸ್ವಚ್ಛಗೊಳಿಸುವ ವೇಸ್ಟೇಜ್‌ನ ಪ್ರಮಾಣ ಹೆಚ್ಚು ಬರುತ್ತಿದೆ ಎಂದು ರೈತರಿಂದ ದೂರುಗಳು ಬಂದಿದ್ದು, 2 ಭಾರಿ ಸ್ವಚ್ಛತೆ ಮಾಡಲು ಸೂಚನೆ ನೀಡಲಾಗಿದೆ. ಹಮಾಲಿಗಳಿಂದ ಹೆಚ್ಚಿನ ಹಣ ಬೇಡಿಕೆ ಇತ್ತು. ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ತೂಕ ಹಾಗೂ ಗುಣಮಟ್ಟದಲ್ಲಿ ಖರೀದಿ ಮಾಡುವ ಉದ್ದೇಶದಿಂದ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ, ಎಪಿಎಂಸಿ ಕಾರ್ಯದರ್ಶಿ, ಆಹಾರ ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್, ಉಪ ತಹಸೀಲ್ದಾರ್ ಒಳಗೊಂಡ ಸಮಿತಿಯನ್ನು ಮಾಡಲಾಗಿದೆ ಮೇಲುಸ್ತುವಾರಿ ಮಾಡಲಾಗುತ್ತಿದೆ ಎಂದರು.
ಪ್ರತಿ ಕೇಂದ್ರದಲ್ಲಿ ಯಾವುದೇ ರೈತರಿಗೆ ತೊಂದರೆಯಾಗದಂತೆ ಮೋಸ ಆಗದಂತೆ, ಅಕ್ರಮಗಳು ನಡೆಯದಂತೆ ಪಾರದರ್ಶಕತೆಯಿಂದ ನಡೆಸಲು ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ವಾಹನಗಳ ಮೂಲಕ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮುಗಳಲ್ಲಿ ಶೇಖರಿಸಿಡಲಾಗುತ್ತದೆ, ಗೋದಾಮುಗಳಿಗೆ ಸಾಗಣೆ ಮಾಡುವ ವಾಹನಕ್ಕೆ ಜಿಪಿಎಸ್ ಅಳವಡಿಸಲಾಗಿದೆ ಹಾಗೂ ಲಾರಿಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಸಂಬಂಧಪಟ್ಟ ಏಜೆನ್ಸಿಯವರಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.
ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅರುಣ್ ಕುಮಾರ್ ಇತರರಿದ್ದರು.