ಅರಕಲಗೂಡು ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಇಒ ಶ್ರೀನಿವಾಸ್ ಮಾತನಾಡಿದರು. ಪುಷ್ಪಲತಾ, ನಾಗೇಂದ್ರ ಕುಮಾರ್ ಇದ್ದರು.
ಅರಕಲಗೂಡು: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸರ್ಕಾರದ ನಿಯಮಗಳ ಪ್ರಕಾರ ಕ್ರಮ ರೂಪಿಸುವುದು ಅಗತ್ಯವಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಾಪಂ ಇಒ ಪಿ.ಶ್ರೀನಿವಾಸ್ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಬೀದಿನಾಯಿಗಳ ಸಂಖ್ಯೆ ಹೆಚ್ಚಾದಂತೆ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಿ ಆರೈಕೆ ನಡೆಸುವುದು ಅಗತ್ಯವಾಗಿದೆ. ಇದಕ್ಕೆ ಗ್ರಾಪಂಗಳಲ್ಲಿ ಶೇ.2ರಷ್ಟು ಹಣ ನಿಗದಿಗೊಳಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂಖ್ಯೆ, ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ತಗಲುವ ವೆಚ್ಚ ಮುಂತಾದ ವಿಷಯಗಳ ಕುರಿತು ಪಟ್ಟಿ ತಯಾರಿಕೆ ನಡೆಸಲಾಗಿದ್ದು, ಟೆಂಡರ್ ಕರೆದು ಮುಂದಿನ ಕ್ರಮಕ್ಕೆ ಸಿದ್ಧತೆ ನಡೆದಿದೆ. ಪಿಡಿಒಗಳು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಬೀದಿನಾಯಿಗಳ ಸಂಖ್ಯೆ ಹೆಚ್ಚಾದಂತೆ ಮುನ್ನಚ್ಚರಿಕೆ ವಹಿಸುವುದು ಅಗತ್ಯ. ಮಾಂಸ, ಕೋಳಿ ಮಾರಾಟ ಮಾಡುವವರು ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಅಗತ್ಯ. ತಾಲೂಕಿನಲ್ಲಿ 2025 ರಲ್ಲಿ 3080 ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು, ಎಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲೂ ನಾಯಿ ಕಡಿತಕ್ಕೆ ನೀಡುವ ಲಸಿಕೆಗಳನ್ನು ಕಾಯ್ದಿರಿಸಲಾಗಿದೆ. ಸಾಕಿದ ನಾಯಿಗಳಿಗೆ ಲಸಿಕೆ ಹಾಕಿಸಿದ್ದು ಅವು ಕಚ್ಚಿದರೆ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ ಎಂದು ಉದಾಸೀನ ಮಾಡದೆ, ಚಿಕಿತ್ಸೆ ಪಡೆಯುವುದು ಅಗತ್ಯವೆಂದರು.
ಸಭೆಯಲ್ಲಿ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ದಿಲೀಪ್, ಪಪಂ ಮುಖ್ಯಾಧಿಕಾರಿ ಸಿ.ಡಿ.ನಾಗೇಂದ್ರಕುಮಾರ್, ಪಶು ವೈದ್ಯಕೀಯ ಇಲಾಖೆ ವೈದ್ಯರು ಮತ್ತು ತಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.