ಬೇಲೂರು ಪಟ್ಟಣದ ಪಂಪ್‌ಹೌಸ್ ರಸ್ತೆಯ ಟಿಎಪಿಸಿಎಂಎಸ್ ಆವರಣದ ಚರಂಡಿ ಸಮೀಪ ಕಸ ಹಾಕಿರುವುದು. 
ಹಾಸನ

ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕ್ರಮವಾಗಲಿ

ಪ್ರಮುಖ ಮುಖ್ಯಾಂಶಗಳು

  • Belur
ಬೇಲೂರು: ಸ್ವಚ್ಛ ಭಾರತ ಅಭಿಯಾನದಡಿ ಪುರಸಭೆಯ ಎಲ್ಲ ವಾರ್ಡ್‌ಗಳಿಗೂ ಕಸ ಸಂಗ್ರಹಣೆಗಾಗಿ ಆಟೋ ಟಿಪ್ಪರ್‌ಗಳು ಪ್ರತಿನಿತ್ಯ ಬರುತ್ತಿವೆ. ಹೀಗಿದ್ದರೂ ಪಟ್ಟಣದ ಪಂಪ್‌ಹೌಸ್ ರಸ್ತೆಯ ಕೆಲವರು ಮಾತ್ರ ಟಿಎಪಿಸಿಎಂಎಸ್ ಆವರಣದ ಚರಂಡಿ ಸಮೀಪ ಕಸ ಹಾಕುವ ಮೂಲಕ ಪರಿಸರ ಹಾಳು ಮಾಡುತ್ತಿದ್ದು, ಇಂತಹವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಿದ್ದು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಪಟ್ಟಣವನ್ನು ಅಂದವಾಗಿಡಬೇಕೆಂದು ಪುರಸಭೆಯಿಂದ ಕೆಲಸಗಳು ಆಗುತ್ತಿವೆ. ನಿಗದಿತ ಸ್ಥಳ ಹಾಗೂ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುವ ವ್ಯವಸ್ಥೆಯೂ ಇದೆ. ಜತೆಗೆ ಈ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಆದರೂ ಪಟ್ಟಣದ 17 ಮತ್ತು 18ನೇ ವಾರ್ಡ್‌ಗೆ ಹೊಂದಿಕೊಂಡಿರುವ ಟಿಎಪಿಸಿಎಂಎಸ್ ಕಟ್ಟಡದ ಹಿಂಭಾಗದಲ್ಲಿರುವ ಚರಂಡಿ ಪಕ್ಕದ ಸ್ಥಳಕ್ಕೆ ಕೆಲವರು ರಾತ್ರಿ ಸಮಯದಲ್ಲಿ ಕಸ ತಂದು ಹಾಕುತ್ತಿದ್ದಾರೆ.
ಈಗ ಮಳೆಗಾಲ ಆರಂಭವಾಗಿದ್ದು, ಕಸ ಚರಂಡಿ ಸೇರಿ ನೀರಿನ ಸರಾಗ ಹರಿವಿಗೆ ತೊಡಕಾಗುತ್ತದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹೀಗಾಗಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಡಿ.ಕೆ.ವೆಂಕಟೇಶ್ ಮಾತನಾಡಿ, ನಾವು ಸಹ ಸಾಕಷ್ಟು ಬಾರಿ ಇಲ್ಲಿ ಕಸ ಹಾಕದಂತೆ ಈ ಭಾಗದ ಜನರಿಗೆ ತಿಳಿ ಹೇಳಿದ್ದೇವೆ. ಆದರೂ ಕಸ ಹಾಕುವ ಪ್ರವೃತ್ತಿ ಮುಂದುವರಿದಿದೆ. ಇಲ್ಲಿನ ಗೊಬ್ಬರ ಮಾರಾಟ ಕೇಂದ್ರದ ಹೊರ ಭಾಗದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಯಾರು ಕಸ ಹಾಕುತ್ತಾರೆ ಎಂಬುದು ತಿಳಿಯುತ್ತದೆ. ಹೀಗಾಗಿ ಅಧಿಕಾರಿಗಳು ಸಿಸಿ ಟಿವಿ ದೃಶ್ಯಗಳನ್ನು ನೋಡಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.