ಅರಸೀಕೆರೆ ಸುಬ್ರಮಣ್ಯನಗರ ಬಡಾವಣೆ ಬೆಟ್ಟದ ಸಮೀಪ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿರುವ ಮನೆಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಕೃಷ್ಣಮೂರ್ತಿ, ಸಮೀವುಲ್ಲ, ವೆಂಕಟಮುನಿ,ಚಂದನ್, ಶ್ರೀನಿವಾಸ್, ಅಣ್ಣಾದೊರೈ ಇತರರಿದ್ದಾರೆ.  
ಹಾಸನ

ಆವಾಸ್ ಯೋಜನೆ ಮನೆ ದುರುಪಯೋಗವಾದರೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ
ಅರಸೀಕೆರೆ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಪಡೆದ ಮನೆಗಳನ್ನು ಫಲಾನುಭವಿಗಳು ಬಾಡಿಗೆ, ಲೀಸ್ ಸೇರಿದಂತೆ ದುರುಪಯೋಗ ಮಾಡಿಕೊಂಡಲ್ಲಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು.
ಸುಬ್ರಮಣ್ಯನಗರ ಬಡಾವಣೆ ಬೆಟ್ಟದ ಸಮೀಪ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿರುವ ಮನೆಗಳ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
ವಸತಿ ರಹಿತ ಬಡವರ ಹಿತ ಮನಗಂಡು ಬಹುಕೋಟಿ ವೆಚ್ಚದಲ್ಲಿ ಜಿ+1 ಮಾದರಿಯಲ್ಲಿ ಮನೆ ಕಟ್ಟಿಕೊಡಲಾಗಿದೆ. ನಗರದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಬಡ ಕುಟುಂಬಗಳು ವಾಸಿಸಲು ಸ್ವಂತ ಮನೆ ನಿರ್ಮಿಸಿಕೊಳ್ಳಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಇದನ್ನು ಅರಿತು ವಿವಿಧ ವಾರ್ಡ್ ಗಳಲ್ಲಿ ಮನೆ ಇಲ್ಲದೆ ವಾಸಿಸುತ್ತಿದ್ದ ಬಡ ಕುಟುಂಬಗಳನ್ನು ಸಮೀಕ್ಷೆ ಮೂಲಕ ಗುರುತಿಸಿ ವಾಸಯೋಗ್ಯ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ ಎಂದರು.
ಕೆಲವರು ಮನೆ ಸಿಕ್ಕಿಲ್ಲ ಎಂದು ಅರ್ಜಿ ಹಾಕಿ ಮನೆ, ಕಚೇರಿಗೆ ಎಡತಾಕುತ್ತಿದ್ದಾರೆ. ಮತ್ತೆ ಕೆಲವರು ಸಿಕ್ಕ ಮನೆ ಪಡೆಯದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನಷ್ಟು ಮಂದಿ ಹೀಗೆ ಪಡೆದ ಮನೆಗಳಲ್ಲಿ ವಾಸಿಸದೆ ನಿರಾಸಕ್ತಿ ತೋರುವ ಜತೆಗೆ ಖಾಲಿ ಬಿಡುವುದು, ಬಾಡಿಗೆ ಅಥವಾ ಲೀಸ್‌ಗೆ ಕೊಡಲು ಮುಂದಾಗಿರುವುದು ಸರಿಯಲ್ಲ. ಹಕ್ಕು ಪತ್ರ ಪಡೆದು ಮನೆಯಲ್ಲಿ ವಾಸ ಮಾಡದೆ ಬೇರೆಯವರಿಗೆ ಬಾಡಿಗೆ ನೀಡಿವುದು ಅಥವಾ ವಾಸ ಮಾಡದೆ ಖಾಲಿ ಬಿಟ್ಟಲ್ಲಿ ಅಂತಹ ಮನೆಗಳನ್ನು ವಾಪಸ್ ಪಡೆದು ಅಗತ್ಯವಿರುವವರಿಗೆ ವಿತರಣೆ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ನಗರಸಭೆ ಮಾಜಿ ಅಧ್ಯಕ್ಷ ಸಮಿವುಲ್ಲಾ ಮಾತನಾಡಿ, ಕ್ಷೇತ್ರದ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಸಚಿವರು ವಸತಿ ರಹಿತ ಬಡ ಕುಟುಂಬಗಳಿಗೆ ಸೂರು ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಿಕೊಟ್ಟಿದ್ದಾರೆ ಎಂದರು.
ಪೌರಾಯುಕ್ತ ಕೃಷ್ಣಮೂರ್ತಿ, ನಗರಸಭೆಯ ಮಾಜಿ ಉಪಾಧ್ಯಕ್ಷ ಮನೋಹರ್, ನಗರ ಸಭೆ ಮಾಜಿ ಸದಸ್ಯರಾದ ವೆಂಕಟಮನಿ, ದರ್ಶನ್, ಆಶ್ರಯ ಸಮಿತಿಯ ಸದಸ್ಯರಾದ ಶ್ರೀನಿವಾಸ್ ಪಾಪಣ್ಣಿ, ಅಣ್ಣಾ ದೊರೈ, ಅಮ್ಜಾದ್ ಪಾಷಾ, ಸೇರಿದಂತೆ ನಗರಸಭೆ ಚಂದನ್, ಸಿಬ್ಬಂದಿ ಹಾಗೂ ಫಲಾನುಭವಿಗಳು ಹಾಜರಿದ್ದರು.