ಬೇಲೂರು ಪಟ್ಟಣದ 7ನೇ ವಾರ್ಡಿನ ಕೆಂಪೇಗೌಡ ರಸ್ತೆಯಲ್ಲಿ ನಿರ್ಮಿಸಿರುವ ಚರಂಡಿ ಕಾಮಗಾರಿಯನ್ನು ಉಷಾ ಸತೀಶ್ ಪರಿಶೀಲಿಸಿದರು. ತೀರ್ಥಕುಮಾರಿ ವೆಂಕಟೇಶ್,ನಿವಾಸಿಗಳಿದ್ದರು. 
ಹಾಸನ

ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರನ ವಿರುದ್ಧ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಬೇಲೂರು ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಎಚ್ಚರಿಕೆ
ಬೇಲೂರು : ಕೆಂಪೇಗೌಡ ರಸ್ತೆಯಲ್ಲಿ ತಕ್ಷಣವೇ ಗುತ್ತಿಗೆದಾರರು ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ಸಮಸ್ಯೆ ಪರಿಹಾರವಾಗದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಉಷಾ ಸತೀಶ್ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ 7ನೇ ವಾರ್ಡ್‌ನ ಕೆಂಪೇಗೌಡ ರಸ್ತೆಯಲ್ಲಿನ ರಸ್ತೆ ಕಾಮಗಾರಿ ಸಂದರ್ಭ ನಿರ್ಮಿಸಿರುವ ಚರಂಡಿ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ಕೆಂಪೇಗೌಡ ರಸ್ತೆ, ವೈಕುಂಠ ಬೀದಿ, ದೇವಾಂಗ ಬೀದಿ, ಹೊಯ್ಸಳ ಬೀದಿ ಹಾಗೂ ಬಿಇಒ ಕಚೇರಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ವೇಳೆ ನೀರಿನ ಪೈಪ್‌ಗಳನ್ನು ಹಾನಿಗೊಳಿಸಿದರೆ ಅದನ್ನು ಗುತ್ತಿಗೆದಾರರೇ ಸರಿ ಪಡಿಸಬೇಕು. ಪುರಸಭೆಯಿಂದ ಪದೇ ಪದೆ ಸರಿಪಡಿಸಲು ಸಾಧ್ಯವಿಲ್ಲ. ಈ ಬಗ್ಗೆ ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, 3-4ತಿಂಗಳಿಂದ ಕೆಂಪೇಗೌಡ ರಸ್ತೆ ಮತ್ತು ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇದರಿಂದ 7ನೇ ವಾರ್ಡಿನ ನಿವಾಸಿಗರಿಗೆ ರಸ್ತೆ ಸಂಪರ್ಕ ಹಾಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕೆಂಪೇಗೌಡ ರಸ್ತೆಯಿಂದ 7ನೇ ವಾರ್ಡಿ ಗುರಪ್ಪಗೌಡ ಬೀದಿಗೆ ಮತ್ತು ಇತರೆಡೆಗೆ ಹೋಗುವ ಸಂಪರ್ಕ ರಸ್ತೆಗೆ ಅಡ್ಡವಾಗಿ 5-6 ಅಡಿ ಎತ್ತರದಲ್ಲಿ ಚರಂಡಿ ನಿರ್ಮಿಸಿರುವುದರಿಂದ ಮಕ್ಕಳು, ವೃದ್ಧರು ಓಡಾಡಲು ಮತ್ತು ದಾಟಲು ಸಮಸ್ಯೆಯಾಗುತ್ತಿದೆ. ಇಲ್ಲಿನ ರಸ್ತೆ ಕಾಮಗಾರಿ ವೇಳೆ ಕೆಲಸಗಾರು ಕುಡಿಯುವ ನೀರಿನ ಪೈಪ್ ಹಾಗೂ ವಾಲ್‌ಗಳನ್ನು ಪದೇ ಪದೆ ಹಾನಿಗೊಳಿಸುತ್ತಿದ್ದಾರೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ನಷ್ಟವನ್ನು ಗುತ್ತಿಗೆದಾರರೇ ಭರಿಸಬೇಕು. ಆದರೆ ಪುರಸಭೆ ಮುಖ್ಯಾಧಿಕಾರಿ ಅಥವಾ ಇಂಜಿನಿಯರ್ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮುಖ್ಯಾಧಿಕಾರಿ ವಾರದಲ್ಲಿ ಒಂದು ದಿನ ಕಚೇರಿಗೆ ಬಂದು ಹೋಗುತ್ತಿರುವುದರಿಂದ ಸ್ಥಳೀಯರ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ. ಅವರು ಕಚೇರಿಯಲ್ಲಿದ್ದು ಸಾರ್ವಜನಿಕರ ಕೆಲಸ ಮಾಡಬೇಕು. ಮುಂದಿನ 8 ದಿನಗಳೊಳಗೆ ಸಂಪರ್ಕ ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ನಾವೇ ಸ್ವತಃ ಜೆಸಿಬಿ ಮೂಲಕ ಚರಂಡಿ ತೆರವುಗೊಳಿಸಿ ಪುರಸಭೆ ಆವರಣ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿವಾಸಿಗಳಾದ ಶೇಷೇಗೌಡ, ಸುರೇಶ್, ರತ್ನಮ್ಮ, ಜಯಮ್ಮ, ಶಬನಬಾನು, ಮಂಜುಳಾ, ಪದ್ಮಾಕ್ಷಿ, ರಾಮು ಸೇರಿದಂತೆ ಇತರರಿದ್ದರು.