ಮಹಾನಗರ ಪಾಲಿಕೆ ಇಂಜಿನಿಯರ್ ವಿರುದ್ಧ ಅಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಆರೋಪಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ದೂರು ಸಲ್ಲಿಸಿದರು. ಆನಂದ್, ಮಧು, ವಿಕ್ರಂ, ಮಂಜುನಾಥ್ ಇತರರಿದ್ದರು. 
ಹಾಸನ

ಪಾಲಿಕೆ ಇಂಜಿನಿಯರ್‌ದಿಂದ ನಿಂದನೆ

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ ಇಂಜಿನಿಯರ್‌ದಿಂದ ನಿಂದನೆ
  • ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಆರೋಪ
  • ಜಿಲ್ಲಾಧಿಕಾರಿಗೆ ದೂರು ಸಲ್ಲಿಕೆ
ಹಾಸನ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕುರಿತು ಮನವಿ ಮಾಡಲು ತೆರಳಿದ್ದ ವೇಳೆ ಮಹಾನಗರ ಪಾಲಿಕೆ ಇಂಜಿನಿಯರ್ ಉದ್ಧಟತನದಿಂದ ವರ್ತಿಸಿದರಲ್ಲದೆ, ವೈಯಕ್ತಿಕವಾಗಿ ನಿಂದಿಸಿದರು ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಹಾಸನ ನಗರದ ವಿವಿಧ ವಾರ್ಡ್‌ಗಳಲ್ಲಿ ಉಂಟಾಗಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತು ಮನವಿ ಸಲ್ಲಿಸಲು ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಲಾಯಿತು. ಆಯುಕ್ತರು ನೀರಿನ ವಿಭಾಗದ ಜವಾಬ್ದಾರಿಯನ್ನು ಇಂಜಿನಿಯರ್ ಕವಿತಾ ಅವರಿಗೆ ವಹಿಸಿರುವುದಾಗಿ ತಿಳಿಸಿ, ಅವರನ್ನು ಸಂಪರ್ಕಿಸಲು ಸೂಚಿಸಿದರು. ನಾನು ಹಾಗೂ ಕೆಲ ಸಾರ್ವಜನಿಕರು ಇಂಜಿನಿಯರ್ ಕಚೇರಿಗೆ ತೆರಳಿದ್ದೆವು. ಆ ವೇಳೆ ಇಂಜಿನಿಯರ್ ಕಚೇರಿಯಲ್ಲಿ ಇರಲಿಲ್ಲ. ಸುಮಾರು 10 ನಿಮಿಷಗಳ ಬಳಿಕ ಅವರು ಕಚೇರಿಗೆ ಬಂದಾಗ, ಯಾರು ನೀವು? ಯಾರ ಅನುಮತಿ ಪಡೆದು ಕಚೇರಿಗೆ ಬಂದಿದ್ದೀರಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿ, ಟೇಬಲ್ ಕುಟ್ಟುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿದರು.
ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಯನ್ನು ತಿಳಿಸಲು ಬಂದಿದ್ದೇವೆ, ದಯವಿಟ್ಟು ಶಾಂತವಾಗಿ ಮಾತುಕತೆ ನಡೆಸಿ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರೂ ಇಂಜಿನಿಯರ್ ಶಾಂತವಾಗದೆ ಜೋರಾಗಿ ಕೂಗಾಡಿದರು ಎಂದರು.
ಪಾಲಿಕೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಲು ಪ್ರಾದೇಶಿಕ ಆಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಇಂಜಿನಿಯರ್ ಅವರ ದುರ್ನಡತೆ ಹಾಗೂ ಅಧಿಕಾರ ದುರ್ಬಳಕೆ ಕುರಿತು ಲಿಖಿತ ದೂರು ಸಲ್ಲಿಸಲಾಗಿದೆ. ಈ ವೇಳೆ ಹಲವಾರು ಸಾರ್ವಜನಿಕರು ಸಹ ಅಧಿಕಾರಿಯ ವರ್ತನೆ ಬಗ್ಗೆ ಆಕ್ಷೇಪ ದಾಖಲಿಸಿದ್ದಾರೆ ಎಂದರು.
ಆಮ್ ಆದ್ಮಿ ಪಾರ್ಟಿಯ ಆನಂದ್, ಮಧು, ವಿಕ್ರಂ, ಮಂಜುನಾಥ್ ಇತರರಿದ್ದರು.