-ಸಾರ್ವಜನಿಕರ ಎದುರೆ ತಾಲೂಕಿನ ಅರೇಹಳ್ಳಿ ಸಮೀಪದ ಲಿಂಗಾಪುರ-ಉದೇವಾರ-ಹುಲ್ಲೇಮಕ್ಕಿ-ಕಡೆಗರ್ಜೆ ಗ್ರಾಮಗಳ ತೋಟಗಳಲ್ಲಿದ್ದ ಸೋಲಾರ್ ವಿದ್ಯುತ್ ತಂತಿ ಮೇಲೆ ಮರ ಉರುಳಿಸಿ ಬೇಲಿ ದಾಟಿ ರಸ್ತೆಗಿಳಿದಿರುವ ಕಾಡಾನೆಗಳ ಹಿಂಡು.
- ತಂತಿ ಮೇಲೆ ಮರ ಉರುಳಿಸಿ ತೋಟಕ್ಕೆ ಲಗ್ಗೆ
- ಅರೇಹಳ್ಳಿ ಹೋಬಳಿಯಲ್ಲಿ ಬೆಳನಷ್ಟದ ಆತಂಕ
ಬೇಲೂರು: ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳಕ್ಕೆ ಮುಕ್ತಿ ಸಿಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಇದಕ್ಕೆ ಒಂದಷ್ಟು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತರು, ಅರಣ್ಯ ಇಲಾಖೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ತೋಟಗಳ ಸುತ್ತಲೂ ಸೋಲಾರ್ ವಿದ್ಯುತ್ ಬೇಲಿ ಅಳವಡಿಸಿದರೂ ಪ್ರಯೋಜನ ಇಲ್ಲ ಎನ್ನುವಂತಾಗಿದೆ. ಆನೆಗಳು ಸೋಲಾರ್ ಬೇಲಿಗಳ ಮೇಲೆ ಒಣಗಿದ ಮರಗಳನ್ನು ಉರುಳಿಸಿ ಬೇಲಿ ದಾಟಿ ತೋಟಕ್ಕೆ ಲಗ್ಗೆ ಇಡುವ ಚಾಣಾಕ್ಷತನ ತೋರುತ್ತಿವೆ.
ಕಾಫಿ ತೋಟಗಳಿಗೆ ಅಳವಡಿಸಿದ್ದ ಸೋಲಾರ್ ವಿದ್ಯುತ್ ತಂತಿ ಬೇಲಿ ಮೇಲೆ ಒಣಗಿದ ಗಿಡ ಮರಗಳನ್ನು ಹಾಕಿ ಬೇಲಿಯನ್ನು ನೆಲಕ್ಕುರುಳಿಸಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ, ಮುಖ್ಯ ರಸ್ತೆಗಳತ್ತ ಆನೆಗಳ ಹಿಂಡು ತೆರಳುತ್ತಿವೆ. ತಾಲೂಕಿನ ಅರೇಹಳ್ಳಿ ಹೋಬಳಿಯ ಗ್ರಾಮಗಳಲ್ಲಿ ಇದು ಸಾಮಾನ್ಯ ಎನ್ನುವಂತಾಗಿದ್ದು, ಕಾಡಾನೆಗಳ ಈ ನಡೆಯಿಂದ ರೈತರು, ಬೆಳೆಗಾರರು, ಕೂಲಿ ಕಾರ್ಮಿಕರು ಜೀವ ಕೈಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಮಲೆನಾಡು ಭಾಗದ ಸಾಕಷ್ಟು ಗ್ರಾಮಗಳಲ್ಲಿ ಕಳೆದ ಐದಾರು ವರ್ಷಗಳಿಂದೀಚೆಗೆ ಕಾಡಾನೆಗಳ ಉಪಟಳ ಹೆಚ್ಚುತ್ತಲೇ ಇದೆ. ಮೊದಲೆಲ್ಲ ಒಂದು ಎರಡು ಆನೆಗಳಿದ್ದವು. ಆದರೆ ಕಳೆದ ಎರಡು, ಮೂರು ವರ್ಷಗಳಿಂದೀಚೆಗೆ ಮೂರರಿಂದ ನಾಲ್ಕು ಗುಂಪುಗಳಲ್ಲಿ ಕಾಡಾನೆಗಳ ಹಿಂಡು ತಾಲೂಕಿನಲ್ಲಿ ಬೀಡು ಬಿಟ್ಟು ಬೆಳೆ ನಾಶ ಪಡಿಸುತ್ತಿರುವುದರಿಂದ ರೈತರಿಗೆ ಅಪಾರ ನಷ್ಟವಾಗಿದೆ. ಕೆಲ ಕಾಡಾನೆಗಳು ಮನುಷ್ಯರ ಮೇಲೂ ದಾಳಿ ನಡೆಸಿ ಸಾಕಷ್ಟು ಪ್ರಾಣ ಹಾನಿ ಉಂಟು ಮಾಡಿರುವ ಘಟನೆಗಳು ಇವೆ. ಇದಲ್ಲದೇ ಹಗಲು ರಾತ್ರಿ ಎನ್ನದೆ ಎಲ್ಲೆಂದರಲ್ಲಿ ಗಜಪಡೆ ಓಡಾಡಲಾರಂಭಿಸಿ ಜನರ ನಿದ್ದೆ ಕೆಡಿಸಿವೆ. ಮೊದಲೆಲ್ಲ ಸಂಜೆಯಾಗುತಿದ್ದಂತೆಯೇ ಕಾಡು ಮತ್ತು ತೋಟಗಳಿಂದ ಹೊರ ಬರುತಿದ್ದ ಹಿಂಡು ಇತ್ತೀಚಿನ ದಿನಗಳಲ್ಲಿ ಹಗಲಿನಲ್ಲೇ ಜನರ ಮುಂದೆಯೇ ರಾಜಾರೋಷವಾಗಿ ಓಡಾಡುವುದಲ್ಲದೆ, ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿವೆ.
ಪರಿಶೀಲಿಸಿ ಬೇಲಿ ದಾಟುತ್ತಿರುವ ಗಜಪಡೆ: ಸರ್ಕಾರ ಕಾಡಾನೆಗಳಿಂದ ಬೆಳೆ ಹಾಗೂ ಮಾನವ-ಆನೆ ಸಂಘರ್ಷ ತಡೆಗಟ್ಟಲು ರೈತರು ಮತ್ತು ಬೆಳೆಗಾರರಿಗೆ ಸಬ್ಸಿಡಿ ಆಧಾರದಲ್ಲಿ ಸೋಲಾರ್ ವಿದ್ಯುತ್ ಬೇಲಿ ಅಳವಡಿಸಿಕೊಳ್ಳಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಅರೇಹಳ್ಳಿ, ಬಿಕ್ಕೋಡು ಹಾಗೂ ಕಸಬಾ ಬಿ ಹೋಬಳಿಗಳಲ್ಲಿ ರೈತರುತೋಟ, ಹೊಲ, ಗದ್ದೆಗಳಿಗೆ ಸೋಲಾರ್ ಬೇಲಿ ಅಳವಡಿಸಿ ಕೊಂಡು ಕೆಲ ತಿಂಗಳು ಕಾಡಾನೆಗಳ ಉಪಟಳದಿಂದ ದೂರವಿದ್ದರು. ಆದರೆ ಕಾಡಾನೆಗಳು ಮನುಷ್ಯರಿಗಿಂತ ಬುದ್ದಿವಂತರು ಎಂಬುದನ್ನು ಸಾಭೀತುಪಡಿಸಿವೆ. ಇತ್ತೀಚೆಗಷ್ಟೇ ಆನೆಯೊಂದು ಅರೇಹಳ್ಳಿ ಸಮೀಪದ ಹೊಸಮನೆ ಗ್ರಾಮದಲ್ಲಿ ಸೋಲಾರ್ ತಂತಿ ಬೇಲಿ ಮೇಲೆ ಕಾಫಿ ಹಾಗೂ ಇತರೆ ಗಿಡಗಳನ್ನು ಹಾಕಿ ಬೇಲಿ ದಾಟಿದ್ದಲ್ಲದೆ, ಪಕ್ಕದ ತೋಟದಲ್ಲಿದ್ದ ಮನುಷ್ಯರು ಮತ್ತು ನಾಯಿಯನ್ನು ಅಟ್ಟಾಡಿಸಿತ್ತು. ಈಗ ಇದೇ ಆನೆ ಲಿಂಗಾಪುರ-ಉದೇವಾರ-ಹುಲ್ಲೇಮಕ್ಕಿ-ಕಡೆಗರ್ಜೆ, ಗುಡ್‌ಪೇಟೆ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದು, ರೈತರು, ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಪ್ರಾರಂಭದಲ್ಲಿ ಸೋಲಾರ್ ವಿದ್ಯುತ್ ಬೇಲಿಯನ್ನು ದಾಟಲು ಹಿಂದೇಟು ಹಾಕುತ್ತಿದ್ದ ಆನೆಗಳು ಈಗ ತಂತಿಯಲ್ಲಿ ವಿದ್ಯುತ್ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ನಂತರ ಬೇಲಿ ದಾಟುತ್ತಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನಾದರೂ ಸರ್ಕಾರ, ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಶಾಶ್ವತವಾಗಿ ದೂರದ ಕಾಡಿಗಟ್ಟಲು ಮುಂದಾಗಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.