ಹಾಸನ ನಗರದ ಹೊಸ ಬಸ್ ನಿಲ್ದಾಣದ ಬಳಿ ಇತ್ತೀಚೆಗೆ ಆಯೋಜಿಸಿದ್ದ ಆಲೂಗಡ್ಡೆ ಮೇಳದಲ್ಲಿ ವಿವಿಧ ತಳಿಯ ಆಲೂಗಡ್ಡೆಯನ್ನು ರೈತರಿಗೆ ಪರಿಚಯಿಸಲಾಯಿತು.
- ಆಲೂಗಡ್ಡೆ ಬೆಳೆ ಪುನಶ್ಚೇತನಕ್ಕೆ ಪಣ
- 2 ದಶಕದಲ್ಲಿ 50 ಸಾವಿರ ಹೆಕ್ಟೇರ್‌ನಿಂದ 5 ಸಾವಿರ ಹೆಕ್ಟೇರ್‌ಗೆ ಕುಸಿತ
- ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ಉತ್ತೇಜನ
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಬೆಳೆಯುವ ವ್ಯಾಪ್ತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಮತ್ತೆ ಜಿಲ್ಲೆಯಲ್ಲಿ ಪುನಶ್ಚೇತನಗೊಳಿಸಬೇಕು ಎಂಬ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಪಣತೊಟ್ಟಿದೆ.
2005-06ನೇ ಸಾಲಿನಲ್ಲಿ ಸುಮಾರು 40ರಿಂದ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಆಲೂಗಡ್ಡೆ ಪ್ರಸ್ತುತ 4ರಿಂದ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದ್ದು, 20 ವರ್ಷದ ಅಂತರದಲ್ಲಿ ಭಾರಿ ಕುಸಿತ ಕಂಡಿದೆ.
ರೈತರಿಗೆ ಹೊಸ ತಳಿಗಳ ಸಂವರ್ಧನೆ ಹಾಗೂ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲಾಖೆ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ.
ಜಿಲ್ಲೆಯಲ್ಲಿ ಮತ್ತೆ ಆಲೂಗಡ್ಡೆ ಮೊದಲಿನಂತೆ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಶಿಮ್ಲಾದ ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಿರುವ ಹೊಸ ಆಲೂಗಡ್ಡೆ ತಳಿಗಳನ್ನು ಪರಿಚಯಿಸುತ್ತಿದೆ.
ಪಂಜಾಬ್ ಹಾಗೂ ಇನ್ನಿತರ ರಾಜ್ಯಗಳ ಆಲೂಗಡ್ಡೆ ಬೀಜೋತ್ಪಾದಕರೊಂದಿಗೆ, ರೋಗ ಮತ್ತು ಕೀಟಗಳ ನಿಯಂತ್ರಣ, ಸಸ್ಯ ಸಂರಕ್ಷಣಾ ಔಷಧಗಳು ಹಾಗೂ ಗೊಬ್ಬರಗಳ ಉತ್ಪಾದಕ ಕಂಪನಿಗಳೊಂದಿಗೆ, ಆಲೂಗಡ್ಡೆ ಬೇಸಾಯದಲ್ಲಿ ಬಳಸುವ ಯಂತ್ರೋಪಕರಣಗಳ ತಯಾರಕ ಕಂಪನಿಗಳೊಂದಿಗೆ ರೈತರು ಹಾಗೂ ಎಫ್‌ಪಿಒಗಳನ್ನು ಸಂಯೋಜಿಸಿ ಆಲೂ ಬೆಳೆ ಹೆಚ್ಚು ಮಾಡುವ ಉದ್ದೇಶದೊಂದಿಗೆ ಕಾರ್ಯಪ್ರವೃತ್ತವಾಗಿದೆ.
ಬೀಜೋತ್ಪಾದಕರ ನೇರ ಸಂಪರ್ಕ ಗುರಿ
ರೈತರು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ನೇರವಾಗಿ ಬೀಜೋತ್ಪಾದಕರನ್ನು ಸಂಪರ್ಕಿಸಿ ಉತ್ತಮ ಗುಣಮಟ್ಟದ ಬಿತ್ತನೆ ಆಲೂಗಡ್ಡೆಗಳನ್ನು ಬಿತ್ತನೆಗೆ ಬಳಸುವುದು, ರಿಯಾಯಿತಿ ದರದಲ್ಲಿ ಸಸ್ಯ ಸಂರಕ್ಷಕಗಳನ್ನು ಹಾಗೂ ರಸಗೊಬ್ಬರಗಳನ್ನು ಕಂಪನಿಗಳಿಂದ ನೇರವಾಗಿ ಪಡೆಯುವುದು. ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಬಳಸಿಕೊಂಡು ಆಲೂಗಡ್ಡೆ ಬಿತ್ತನೆ ಹಾಗೂ ಕಟಾವನ್ನು ಯಂತ್ರಗಳ ಮೂಲಕವೇ ಮಾಡಿಸುವುದು, ರೋಗ ನಿರೋಧಕ ಶಕ್ತಿ ಹೊಂದಿರುವ ಹೊಸ ತಳಿಗಳನ್ನು ಬೆಳೆಯುವಂತೆ ಮಾಡಲು ತೋಟಗಾರಿಕೆ ಇಲಾಖೆ ಯೋಜನೆ ರೂಪಿಸಿದೆ.
ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಥಮ ಬಾರಿಗೆ ಇತ್ತೀಚೆಗೆ ಹಾಸನದಲ್ಲಿ ಆಲೂಮೇಳವನ್ನು ಆಯೋಜನೆ ಮಾಡಲಾಗಿತ್ತು. ಮೇಳಕ್ಕೆ ಜಿಲ್ಲೆಯ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೇಳದಲ್ಲಿ ಪಂಜಾಬಿನ ಬೀಜ ಉತ್ಪಾದನೆ ಮಾಡುವ 10 ರಿಂದ 15 ರೈತರು ಹಾಗೂ ಸ್ಥಳಿಯವಾಗಿ 4 ರಿಂದ 5 ವ್ಯಾಪಾರಸ್ಥರು ಭಾಗಿಯಾಗಿ ತಮ್ಮಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಹಾಗೂ ವಿವಿಧ ತಳಿಗಳನ್ನು ರೈತರಿಗೆ ಪರಿಚಯಿಸಿದರು. ಮೇಳದಲ್ಲಿ ಆಲೂಗಡ್ಡೆ ಬೆಳೆಯ ವಿವಿಧ ರೋಗ ಹಾಗೂ ಕೀಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ 25 ಕ್ಕೂ ಹೆಚ್ಚು ಔಷಧೀಯ ಕಂಪನಿಗಳು ಮತ್ತು ಆಲೂಗಡ್ಡೆ ಬೇಸಾಯಕ್ಕೆ ಬೇಕಾಗುವಂತಹ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡಲು 5 ರಿಂದ 6 ಯಂತ್ರೋಪಕರಣಗಳ ಉತ್ಪಾದಕ ಕಂಪನಿಯವರು ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ, ಸೋಮನಹಳ್ಳಿ ಕಾವಲು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ಕೇಂದ್ರಿಯ ಆಲೂಗಡ್ಡೆ ಸಂಶೋಧನಾ ಕೇಂದ್ರ ಊಟಿಯಿಂದ ವಿಜ್ಞಾನಿಗಳು ಭಾಗವಹಿಸಿ ಆಲೂಗಡ್ಡೆ ಉತ್ಪಾದನೆ ಬಗ್ಗೆ ರೈತರೊಂದಿಗೆ ಸಂವಾದ ನಡೆಸಿ ರೈತರಿಗೆ ಆಲೂಗಡ್ಡೆ ಉತ್ಪಾದನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ಆಲೂಮೇಳಕ್ಕೆ ಜಿಲ್ಲೆಯ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಆಲೂಗಡ್ಡೆ ಉತ್ಪಾದನೆ ಹಾಗೂ ಉತ್ತಮ ಇಳುವರಿ ಪಡೆಯುವ ಸಂಬಂಧ ತಿಳಿವಳಿಕೆ ಪಡೆದುಕೊಂಡರು. ಮೇಳದಲ್ಲಿ ವಿವಿಧ ಬೀಜೋತ್ಪಾದನಾ ಕಂಪನಿಗಳು, ಔಷಧ ಕಂಪನಿಗಳು ಯಂತ್ರೋಪಕರಣ ಸೇರಿದಂತೆ 60-65 ಕಂಪನಿಗಳು ಸ್ಟಾಲ್‌ಗಳ ಮೂಲಕ ರೈತರಿಗೆ ಮಾರ್ಗದರ್ಶನ ಮಾಡಿದರು.
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಬೀಜೋತ್ಪಾದನೆ ಸಂಬಂಧ ಎಫ್‌ಪಿಗಳನ್ನು ರೈತರಿಗೆ ಪರಿಚಯಿಸಲಾಯಿತು.
ಜಿಲ್ಲೆಯಲ್ಲಿ ಆಲೂಗಡ್ಡೆ ಉತ್ಪಾದನೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆಲೂ ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಆಲೂಬೆಳೆಗೆ ಮತ್ತೆ ಚೈತನ್ಯ ನೀಡುವ ನಿಟ್ಟಿನಲ್ಲಿ ಇತ್ತೀಚೆಗೆ ಜಿಲ್ಲೆಯಲ್ಲಿ ಆಲೂ ಮೇಳವನ್ನು ಆಯೋಜಿಸಿ ರೈತರಿಗೆ ಮಾಹಿತಿ ಒದಗಿಸುವ ಪ್ರಯತ್ನ ಮಾಡಲಾಯಿತು. ಹೊಸ ತಳಿಗಳ ಸಂವರ್ಧನೆ ಹಾಗೂ ಬೀಜೋತ್ಪಾದನೆ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ