ಪುರಸಭೆ ವ್ಯಾಪ್ತಿಯ ನಿವೇಶನರಹಿತ ಗುಡಿಸಲು ವಾಸಿಗಳ ನಿವೇಶನ ವಿತರಣೆಗೆ ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಲಾಟರಿ(ಚೀಟಿ ಎತ್ತುವ)ಮೂಲಕ ಹೆಸರು ಆಯ್ಕೆ ಮಾಡಲಾಯಿತು. ಮಹಮ್ಮದ್ ಇಕ್ಬಾಲ್, ಡಿಂಪಲ್‌ರಾಣಿ, ನಾಗರಾಜ್, ಬಸವರಾಜ ಶಿಗ್ಗಾವಿ ಇದ್ದರು. 
ಹಾಸನ

65 ಜನ ಗುಡಿಸಲು ವಾಸಿಗಳಿಗೆ ನಿವೇಶನ

ಲೋಕೇಶ್ ಮನು. ಡಿ

ಬೇಲೂರು:

ಪುರಸಭೆ ವ್ಯಾಪ್ತಿಯ ನಿವೇಶನ ರಹಿತ ಬಡ ಕುಟುಂಬಗಳಿಗೆ ಆಶ್ರಯ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ಸಂವಿಧಾನದ ಚೌಕಟ್ಟಿನೊಳಗೆ ನಡೆಯುತ್ತಿದ್ದು, ಪ್ರಸ್ತುತ 65 ಜನ ಗುಡಿಸಲು ವಾಸಿಗಳಿಗೆ ಲಾಟರಿ(ಚೀಟಿ ಎತ್ತುವ) ಮೂಲಕ ನಿವೇಶನ ವಿತರಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಪುರಸಭೆ ಅಧ್ಯಕ್ಷರ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಆಶ್ರಯ ನಿವೇಶನಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿದ್ದು, ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ಇಲ್ಲಿ ಯಾವುದೇ ಅಕ್ರಮ, ತಾರತಮ್ಯ ಹಾಗೂ ಪಕ್ಷಪಾತಕ್ಕೆ ಅವಕಾಶವಿಲ್ಲ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗುವುದು. ಈಗ ಗುಡಿಸಲು ವಾಸಿಗಳನ್ನು ಆಯ್ಕೆ ಮಾಡಿದ್ದು, ಅತಿ ಶೀಘ್ರದಲ್ಲಿ ಗುಡಿಸಲು ಮುಕ್ತ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.
ಫಲಾನುಭವಿಗಳ ಆಯ್ಕೆಯನ್ನು ಲಾಟರಿ(ಚೀಟಿ ಎತ್ತುವ) ಮೂಲಕ ನಡೆಸಿ ಯಾರಿಗೂ ಅನ್ಯಾಯವಾಗದಂತೆ ವಿತರಿಸಲಾಗುವುದು. ಅಲ್ಲದೆ ಸಮೀಪದ ರಾಯಪುರ ಹಾಗೂ ಬಂಟೇನಹಳ್ಳಿ ಗ್ರಾಮಗಳ 231 ನಿವೇಶನಗಳ ಪ್ರಕರಣ ನ್ಯಾಯಾಲಯದಲ್ಲಿ ಜನರ ಪರವಾಗಿ ಇತ್ಯರ್ಥಗೊಂಡಿದ್ದು, ಎಲ್ಲ ನಿವೇಶನಗಳನ್ನು ಬಡ ಕುಟುಂಬಗಳಿಗೆ ಹಂಚಿಕೆ ಮಾಡಲಾಗುವುದು. ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದ್ದು, ನಂತರ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಹೊಳೆಬೀದಿಯಲ್ಲಿನ ಸರ್ಕಾರಿ ಜಾಗವನ್ನು ಗುರುತಿಸಿ ಆ.8ರೊಳಗೆ ವಶಕ್ಕೆ ಪಡೆದು ಸಾರ್ವಜನಿಕರಿಗೆ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜತೆಗೆ ಪುರಸಭೆಯ 18 ಮಳಿಗೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಸಂಬಂಧಿಸಿದ ಎಸ್‌ಒಪಿ ತಡೆ ಹಿಡಿಯಲಾಗಿದೆ. ಈ ಪ್ರಕರಣದ ಸಂಪೂರ್ಣ ಮಾಹಿತಿ ಹಾಗೂ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗೆ ತಿಳಿಸಿದರು.
ಆಶ್ರಯ ಸಮಿತಿ ಸದಸ್ಯ ಬಿ.ಸಿ.ಹರೀಶ್ ಮಾತನಾಡಿ, ಹೋಳೆಬೀದಿಯ ಹೊಯ್ಸಳ ಕಾಲೇಜು ಆವರಣ ಸೇರಿದಂತೆ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿದರಲ್ಲದೆ, ತಕ್ಷಣ ತೆರವುಗೊಳಿಸುವಂತೆ ಒತ್ತಾಯಿಸಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಈಗಾಗಲೇ ಹೊಳೆಬೀದಿಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. 20 ಗುಂಟೆ ಜಾಗದ ಪರಿಶೀಲನೆಯೂ ಪೂರ್ಣಗೊಂಡಿದ್ದು, ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್ ಮಾತನಾಡಿ, ಪುರಸಭೆ ವ್ಯಾಪ್ತಿಯ ಎಲ್ಲ 23 ವಾರ್ಡ್‌ಗಳ ಬಡವರಿಗೆ ಸಮಾನ ಅವಕಾಶ ಕಲ್ಪಿಸಿ ಆಶ್ರಯ ನಿವೇಶನ ವಿತರಿಸಬೇಕು. ಹೊಳೆಬೀದಿಯಲ್ಲಿ ಜನವಸತಿ ನಡುವೆ ಕಾರ್ಯ ನಿರ್ವಹಿಸುತ್ತಿರುವ ಕೋಳಿ ಅಂಗಡಿಗಳನ್ನು ಒಂದೇ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯವಿದೆ ಎಂದು ಕೋರಿದರು.
ಆಶ್ರಯ ಸಮಿತಿ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಡಿಂಪಲ್ ರಾಣಿ, ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಗ್ಗಾವಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.