ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯಸ್ಮರಣೆಯನ್ನು ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. 
ಹಾಸನ

ಜಾತಿ-ಧರ್ಮ ಮೀರಿ ಎಲ್ಲರಿಗೂ ಶಿಕ್ಷಣ ನೀಡಿದ ಸಂತ

ಪ್ರಮುಖ ಮುಖ್ಯಾಂಶಗಳು

  • ಜಾತಿ-ಧರ್ಮ ಮೀರಿ ಎಲ್ಲರಿಗೂ ಶಿಕ್ಷಣ ನೀಡಿದ ಸಂತ
  • ಶ್ರೀಸಂಗಮೇಶ್ವರ ಸ್ವಾಮೀಜಿ ಅಭಿಪ್ರಾಯ
  • ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ
ಹಾಸನ: ಮಾನವೀಯತೆ, ಸೇವೆ ಮತ್ತು ದಾಸೋಹದ ಮಹತ್ವವನ್ನು ಬದುಕಿನ ಉಸಿರಾಗಿಸಿಕೊಂಡ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 7ನೇ ವರ್ಷದ ಪುಣ್ಯಸ್ಮರಣೆಯನ್ನು ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಹಿನ್ನೆಲೆ ಆರೋಗ್ಯ ಉಚಿತ ತಪಾಸಣೆ ಶಿಬಿರ, ಅನ್ನಸಂತರ್ಪಣೆ ಹಾಗೂ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜವೇನಹಳ್ಳಿ ಮಠದ ಮಠಾಧೀಶ ಶ್ರೀ ಸಂಗಮೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳು ಜಾತಿ-ಧರ್ಮ ಭೇದವಿಲ್ಲದೆ ಮಠಕ್ಕೆ ಬಂದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನ್ನದಾಸೋಹ, ಪ್ರಾಥಮಿಕ ಶಿಕ್ಷಣದಿಂದ ಪದವಿ ಹಾಗೂ ವೃತ್ತಿಪರ ಶಿಕ್ಷಣದವರೆಗೆ ಉಚಿತ ವಿದ್ಯಾಭ್ಯಾಸ ನೀಡಿದ ಮಹಾನ್ ಯೋಗಿ ಎಂದರು.
ಜ.21ರಂದು ಆಚರಿಸುವ ‘ದಾಸೋಹ ದಿನ’ವಚನ ಸಾಹಿತ್ಯದಲ್ಲಿನ ದಾಸೋಹ ತತ್ವದ ಮಹತ್ವವನ್ನು ಸಾರುತ್ತಿದ್ದು, ಸಾಮಾಜಿಕ ಸಮಾನತೆ, ಕಾಯಕದ ಗೌರವ ಹಾಗೂ ನಿಸ್ವಾರ್ಥ ಸೇವೆಯ ಸಂದೇಶವನ್ನು ಜನತೆಗೆ ತಲುಪಿಸುತ್ತದೆ ಎಂದು ವಿವರಿಸಿದರು.
ಕಾಂಗ್ರೆಸ್ ಮುಖಂಡ ಜೆಸಿಬಿ ಚಂದ್ರಶೇಖರ್ ಮಾತನಾಡಿ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು. ಅವರ ಪುಣ್ಯಸ್ಮರಣೆ ದಿನ ಮರೆಯಲಾಗದ ದಿನವಾಗಿದ್ದು, ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾನೈಟ್ ರಾಜಶೇಖರ್ ಮಾತನಾಡಿ, ನಮ್ಮೆಲ್ಲರ ಆರಾಧ್ಯ ದೈವ ಹಾಗೂ ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮೀಜಿಯ 7ನೇ ವರ್ಷದ ಪುಣ್ಯಸ್ಮರಣೆಯನ್ನು ಮಹಾಸಭಾ ಯುವ ಘಟಕ ಅತ್ಯಂತ ಅಚ್ಚುಕಟ್ಟಾಗಿ ನಡೆಸುತ್ತಿದೆ ಎಂದರು. ಒಂದು ಕಾಲದಲ್ಲಿ ರಾಜ್ಯದಲ್ಲಿ ಸಾವಿರಾರು ಮಠಗಳಿದ್ದರೂ ಇಂದು ಅವು ಕಡಿಮೆಯಾಗುತ್ತಿವೆ. ಆದರೆ ಗುರುಕುಲ ಪದ್ಧತಿ ಇನ್ನೂ ಉಳಿದಿದ್ದರೆ ಅದಕ್ಕೆ ಕಾರಣ ಸಿದ್ಧಗಂಗಾ ಶ್ರೀಗಳ ತ್ಯಾಗ ಹಾಗೂ ಸೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಅವಿನಾಶ್, ಶರತ್ ಭೂಷಣ್, ಮನೋಜ್ ಶರತ್, ಅಡಗೂರು ಬಸವರಾಜು, ಅಜಿತ್ ಆಲೂರು, ವಿಕ್ರಂ, ತಾಲೂಕು ಘಟಕದ ಅಧ್ಯಕ್ಷೆ ಮಮತಾ ಪಟೇಲ್, ಗೀತಾ, ಧನಲಕ್ಷ್ಮೀ, ಬಿ.ಆರ್. ವಸಂತಕುಮಾರ್, ಮಲ್ಲಿಕಾರ್ಜುನ್, ಕೀರ್ತಿಕುಮಾರ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.