ಕಣಗುಪ್ಪೆ ಗ್ರಾಮದ ರಸ್ತೆಯಲ್ಲಿ ಸಾಗುತ್ತಿರುವ ಒಂಟಿ ಕಾಡಾನೆ 
ಹಾಸನ

ತೋಟದಲ್ಲಿ ಒಂಟಿ ಸಲಗ ದಾಳಿ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಕಣಗುಪ್ಪೆ ಗ್ರಾಮದ ರೈತನಿಗೆ ಗಾಯ
ಬೇಲೂರು: ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ರೈತನ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದೆ. ಅವರನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಣಗುಪ್ಪೆ ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದಷ್ಟೆ ತೋಟದಲ್ಲಿ ಕೆಲಸ ಮಾಡುತಿದ್ದ ರೈತನನ್ನು ಒಂಟಿ ಸಲಗ ಬಲಿ ಪಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಅದೇ ಕಣಗುಪ್ಪೆ ಗ್ರಾಮದ ಸಿದ್ಧಶೆಟ್ಟಿ (65) ಅವರ ಮೇಲೆ ಸಲಗ ದಾಳಿ ನಡೆಸಿದೆ. ಅವರು ಮನೆ ಸಮೀಪದ ತೋಟದಲ್ಲಿ ಹಸುಗಳನ್ನು ಕಟ್ಟುವಾಗ ಬಂದ ಸಲಗ ಸಿದ್ದಶೆಟ್ಟಿ ಅವರ ಮೇಲೆ ಏಕಾಏಕಿ ದಾಳಿ ಮಾಡಿದೆ.
ಈ ವೇಳೆ ಸಿದ್ಧಶೆಟ್ಟಿ ಅವರು ಜೋರಾಗಿ ಕೂಗಿಕೊಂಡಿದ್ದರಿಂದ ಅವರನ್ನು ಬಿಟ್ಟು ಬಂದ ದಾರಿಯಲ್ಲೇ ಅದು ಮರಳಿದೆ. ಆದರೆ ಒಂಟಿ ಸಲಗ ದಾಳಿಯಿಂದ ಸಿದ್ಧಶೆಟ್ಟಿ ಅವರ ಹೊಟ್ಟೆ ಹಾಗೂ ಕೈಗೆ ಗಾಯಗಳಾಗಿವೆ. ಶಬ್ದ ಕೇಳಿ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ.
ಗಾಯಾಳುವಿನ ಆರೋಗ್ಯ ವಿಚಾರಣೆ : ಕಾಡಾನೆ ದಾಳಿ ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸಿದ್ಧಶೆಟ್ಟರ ಆರೋಗ್ಯ ವಿಚಾರಿಸಿದರು.
ಅರಣ್ಯ ಇಲಾಖೆಯ ಇಟಿಎಫ್ ಆರ್‌ಎಫ್‌ಒ ತ್ರಿಮೂರ್ತಿ ಮಾತನಾಡಿ, ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಗುರುವಾರ ಬೆಳಗ್ಗೆ 9.45 ಗಂಟೆ ಸಮಯದಲ್ಲಿ ಗ್ರಾಮದ ಸಿದ್ದಶೆಟ್ಟಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜತೆಗೆ ಕಣಗುಪ್ಪೆ ಗ್ರಾಮದ ಆಸುಪಾಸಿನ ಗ್ರಾಮಗಳಲ್ಲಿ 12 ಆನೆಗಳ ಹಿಂಡು ಬೀಡು ಬಿಟ್ಟಿದೆ. ಆದರೆ ಈ ಆನೆಗಳ ಗುಂಪಿನಿಂದ ಬೇರ್ಪಟ್ಟ ಒಂಟಿ ಸಲಗ ಗ್ರಾಮದೊಳಗೆ ನುಗ್ಗಿದ್ದರಿಂದ ಈ ಘಟನೆ ನಡೆದಿದೆ. ಸದ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದರು. ವಲಯ ಅರಣ್ಯಧಿಕಾರಿ ಯತೀಶ್ ಸೇರಿದಂತೆ ಕಣಗುಪ್ಪೆ ಗ್ರಾಮಸ್ಥರು ಇದ್ದರು.