ಅರಕಲಗೂಡಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು. ಕೆ.ಸಿ. ಸೌಮ್ಯಾ, ನಾಗೇಂದ್ರ ಕುಮಾರ್, ಕೆ.ಪಿ. ನಾರಾಯಣ ಇತರರು ಇದ್ದರು. 
ಹಾಸನ

ಉತ್ತಮ ಪರಿಸರದಿಂದ ಆರೋಗ್ಯಯುತ ಬದುಕು ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅಭಿಪ್ರಾಯ
ಅರಕಲಗೂಡು: ಪರಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಉತ್ತಮ ಪರಿಸರ ಇದ್ದಾಗ ಆರೋಗ್ಯಯುತ ಬದುಕು ಸಾಧ್ಯವಾಗಲಿದೆ ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅಭಿಪ್ರಾಯಪಟ್ಟರು.
ಪಟ್ಟಣ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಸಿರು ವಾತಾವರಣವು ಮಕ್ಕಳ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಪಪಂ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್ ಮಾತನಾಡಿ, ಪಪಂ ಕಸ ಸಾಗಣೆ ವಾಹನ ಬಂದಾಗ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ ನೀಡಬೇಕು. ಎಲ್ಲೆಂದರಲ್ಲಿ ಕಸ ಹಾಕಿ ಪರಿಸರ ಮಾಲಿನ್ಯ ಮಾಡಬಾರದು ಎಂದರು.
ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಪ್ರಕೃತಿ ಮಾತೆಯ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಜಾಗೃತಿ ಜಾಥಾ, ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಿಇಒ ಕೆ.ಪಿ.ನಾರಾಯಣ್, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ರಂಗಸ್ವಾಮಿ, ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್ ಇತರರಿದ್ದರು.
ಪಟ್ಟಣದ ಮಲ್ನಾಡ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಪರಸರ ಜಾಗೃತಿ ಜಾಥಾ ನಡೆಸಿದರು. ಅನಕೃ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರಲ್ಲದೆ ವಿದ್ಯಾರ್ಥಿಗಳು ಪರಿಸರ ಗೀತೆಗೆ ನೃತ್ಯ ಪ್ರದರ್ಶನ ಮಾಡಿ ಗಮನ ಸೆಳೆದರು. ಸಾರ್ವಜನಿಕರಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.
ಸೆಸ್ಕ್: ಪಟ್ಟಣದ ಸೆಸ್ಕ್ ಸಿಬ್ಬಂದಿ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 55 ಬಾಟಲ್ ರಕ್ತ ಸಂಗ್ರಹಿಸಲಾಯಿತು. ಕಚೇರಿ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ ನೇತೃತ್ವದಲ್ಲಿ ತಾಲೂಕಿನ ರಾಮೇನಹಳ್ಳಿ ಪ್ರಾಥಮಿಕ ಶಾಲಾ ಆವರಣ ಮತ್ತು ದೇವಾಲಯದ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನಡೆಲಾಯಿತು. ಮುಖಂಡರಾದ ಮಾದೇಶ್, ಪಾಂಡುರಂಗ, ಲೋಕೇಶ್ ನಸ್ರುಲ್ಲಾ ಇತರರಿದ್ದರು.