ಅರಕಲಗೂಡಿನಲ್ಲಿ ಶುಕ್ರವಾರ ತವರಿಗೆ ಮರಳಿದ ಯೋಧ ಮಂಜುನಾಥ್ ಅವರನ್ನು ಭವ್ಯ ಮೆರವಣಿಗೆ ನಡೆಸಿ ಜನರು ಸಂಭ್ರಮಿಸಿದರು.
ಅರಕಲಗೂಡು: ಭಾರತೀಯ ಸೇನೆಯಲ್ಲಿ ಎರಡು ದಶಕಗಳ ಕಾಲ ದೇಶಸೇವೆ ಮಾಡಿ ನಿವೃತ್ತಿ ಹೊಂದಿ ತವರಿಗೆ ಮರಳಿದ ತಾಲೂಕಿನ ವೀರ ಯೋಧ ಮಂಜುನಾಥ್ ಅವರಿಗೆ ಪಟ್ಟಣದಲ್ಲಿ ಶುಕ್ರವಾರ ಭವ್ಯ ಸ್ವಾಗತ ದೊರೆಯಿತು.
ತಾಲೂಕಿನ ನೆಹರುನಗರದ ಯೋಧ ಮಂಜುನಾಥ ಸೇವಾ ನಿವೃತ್ತಿಯಾಗಿ ಹುಟ್ಟೂರಿಗೆ ಆಗಮಿಸಿದರು. ಸೇನಾ ಸಮವಸ್ತ್ರದಲ್ಲೇ ಬಂದಿಳಿದ ಹೆಮ್ಮೆಯ ಯೋಧನ ಮೇಲೆ ಹೂ ಮಳೆ ಸುರಿಸಿ ಸೇವೆಯನ್ನು ಕೊಂಡಾಡಿದ ಜನರು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ವೇಳೆ ಯೋಧ ಮಂಜುನಾಥ ಮಾತನಾಡಿ, ತಮ್ಮ 22 ವರ್ಷಗಳ ಸೇನೆಯ ಸೇವೆಯಲ್ಲಿ ಜಮ್ಮು-ಕಾಶ್ಮೀರ, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದೇನೆ. ಇಂದಿನ ಯುವ ಸಮೂಹ ಕೂಡ ದೇಶಸೇವೆ ಮಾಡಬೇಕು ಎಂದು ಕರೆ ನೀಡಿದರು.
ಬಿಎಸ್‌ಪಿ ಮುಖಂಡ ಅತ್ನಿ ಹರೀಶ್ ಮಾತನಾಡಿ, ದೇಶ ಸೇವೆಗಾಗಿ ಕುಟುಂಬವನ್ನು ಬಿಟ್ಟು ಬಹುದೂರ ಹೋಗಿ ಜೀವದ ಹಂಗು ತೊರೆದು ಬದುಕೋದು ಕಷ್ಟದ ಕೆಲಸ, ಅದರಲ್ಲಿ 22 ವರ್ಷ ದೇಶ ಸೇವೆ ಮಾಡಿ ಮರಳಿದ ಮಂಜುನಾಥ ಅವರ ಸೇವೆ ಎಲ್ಲರಿಗೂ ಸ್ಫೂರ್ತಿಎಂದರು,
ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಬಳಿಕ ನೂರಾರು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.