ಚನ್ನರಾಯಪಟ್ಟಣದಲ್ಲಿ ಆಯೋಜಿಸಿರುವ ರಾಮೋತ್ಸವ ಕಾರ್ಯಕ್ರಮದ ಪೋಸ್ಟರನ್ನು ಗಣ್ಯರು ಬಿಡುಗಡೆಗೊಳಿಸಿದರು. ಸಿ.ಆರ್.ಚಿದಾನಂದ್‌ಗೌಡ, ಧರಣಿ ನಾಗೇಶ್, ನಾಗರಾಜು, ರೂಪೇಶ್, ಕೆರೆಬೀದಿ ಆನಂದ್, ಮಾರೇನಹಳ್ಳಿ ಆನಂದ್ ಇದ್ದರು. 
ಹಾಸನ

ಚನ್ನರಾಯಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ನಾಳೆ

ಪ್ರಮುಖ ಮುಖ್ಯಾಂಶಗಳು

  • ಫೆ.7
  • ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್‌ಗೌಡ
ಚನ್ನರಾಯಪಟ್ಟಣ: ಹಿಂದೂಗಳ ಆರಾಧ್ಯದೈವ ಶ್ರೀರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಿ 2ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಫೆ.7ರಂದು ರಾಮೋತ್ಸವ ಹಿಂದೂ ಸಂಗಮ-2026 ಕಾರ್ಯಕ್ರಮದೊಂದಿಗೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದ ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್‌ಗೌಡ ತಿಳಿಸಿದರು.
ತಾಲೂಕಿನ ಹಿಂದೂಗಳು ಸೇರಿ ವಾರ್ಷಿಕೋತ್ಸವ ಆಚರಣೆಗೆ ಮುಂದಾಗಿದ್ದು, ರಾಮೋತ್ಸವ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೃಹತ್ ಶೋಭಾಯಾತ್ರೆಯನ್ನು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಗ್ರಾಮದೇವತೆ ವಳಗೇರಮ್ಮ ದೇವಿ ಆವರಣದಲ್ಲಿ ರಾಮತಾರಕ ಹೋಮ ನಡೆಸಿ ನಂತರ ಅಲ್ಲಿಂದ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶೋಭಾಯಾತ್ರೆ ಬಾಗೂರು ರಸ್ತೆಯ ಮೂಲಕ ಕೋಟೆ ಬಡಾವಣೆಯಲ್ಲಿ ಸಾಗಿ ಹೊಸ ಬಸ್‌ನಿಲ್ದಾಣದ ಮೂಲಕ ನವೋದಯ ವೃತ್ತ, ಮೈಸೂರು ರಸ್ತೆ, ಸಾರ್ವಜನಿಕ ಆಸ್ಪತ್ರೆ ರಸ್ತೆ ಮೂಲಕ ಬಿ.ಎಂ.ರಸ್ತೆಯಲ್ಲಿನ ಕೆ.ಆರ್.ವೃತ್ತದಲ್ಲಿ ಅಂತ್ಯಗೊಳ್ಳಲಿದೆ. ಹಲವು ಕಲಾತಂಡಗಳು, ಕೇರಳದ ಚಂಡೆವಾದ್ಯ, ಹನುಮಾನ್ ಟ್ಯಾಬ್ಲೋ ಸೇರಿದಂತೆ ಪ್ರತಿ ಹೋಬಳಿಗೊಂದರಂತೆ ಪ್ರಮುಖ ಉತ್ಸವಮೂರ್ತಿಗಳನ್ನು ಮೆರವಣಿಗೆ ನಡೆಸಲಾಗುವುದು ಎಂದರು.
ಇನ್ನೂ ಶೋಭಾಯಾತ್ರೆಗೆ ವಿಶೇಷ ಅತಿಥಿಯಾಗಿ ಬಿಗ್‌ಬಾಸ್ ವಿಜೇತ ಗಿಲ್ಲಿನಟ ಆಗಮಿಸಲಿದ್ದಾರೆ. ತಾಲೂಕಿನ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಮೋತ್ಸವ ಕಾರ್ಯಕ್ರಮ ಯಶ್ವಸಿಗೊಳಿಸಬೇಕು ಎಂದು ಮನವಿ ಮಾಡಿದರು.
ಹಿಂದೂ ಮುಖಂಡರಾದ ಧರಣಿ ನಾಗೇಶ್, ನಾಗರಾಜು, ರೂಪೇಶ್, ಕೆರೆಬೀದಿ ಆನಂದ್, ಮಾರೇನಹಳ್ಳಿ ಆನಂದ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.