ಚಗಚಗೆರೆ ಗ್ರಾಮದಲ್ಲಿ ಶನೈಶ್ಚರ ಸ್ವಾಮಿ, ಮಳೆಯಮ್ಮ ದೇವಿ, ಹಂಗರಹಳ್ಳಿ ಬಸವಣ್ಣ ಅವರನ್ನು 108 ಪೂರ್ಣ ಕುಂಭ ಕಳಶಗಳೊಂದಿಗೆ ಮೆರವಣಿಗೆ ಮಾಡಲಾಯಿತು.
- ಚಗಚಗೆರೆ ಗ್ರಾಮ
- ಶ್ರೀ ಉದ್ಭವ ಶನೈಶ್ಚರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ
ಗಂಡಸಿ: ಹೋಬಳಿಯ ಚಗಚಗೆರೆ ಗ್ರಾಮದಲ್ಲಿ ಶ್ರೀ ಉದ್ಭವ ಶನೈಶ್ಚರ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ 42ನೇ ವರ್ಷದ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ 8 ಗಂಟೆಗೆ ವಿಧಿವಿಧಾನಗಳೊಂದಿಗೆ ಗಂಗಾಮಾತೆಗೆ ಬಾಗಿನ ಸಮರ್ಪಣೆ ಮಾಡಿ ಪೂಜೆ ಪ್ರಾರ್ಥನೆ ಸಲ್ಲಿಸಿ ನಂತರ 108 ಅಗ್ರೋಧಕ ಕಳಸವತ್ತ ಸುಮಂಗಲಿಯರು ಶನೈಶ್ಚರ ಸ್ವಾಮಿ, ಆದಿಶಕ್ತಿ ಮಳೆಯಮ್ಮ ದೇವಿ, ಶ್ರೀವಿದ್ಯಾ ಚೌಡೇಶ್ವರಿ ಅಮ್ಮನವರು, ಹಂಗರಹಳ್ಳಿ ಬಸವಣ್ಣ ಅವರನ್ನು ಕರಡೆ ವಾದ್ಯ, ಹರೇವಾದ್ಯ, ನಾದಸ್ವರವಾದ್ಯ, ಭಾರಿ ಮದ್ದು-ಗುಂಡಿನ ಸುರುಮಳೆಯೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಶ್ರೀ ಸ್ವಾಮಿಯ ಮೂಲಸ್ಥಾನಕ್ಕೆ ಕರೆತರಲಾಯಿತು.
ಶ್ರೀ ಸ್ವಾಮಿಯ ಮೂಲಸ್ಥಾನದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ ಗಾಯತ್ರಿ ಹೋಮ ನಂತರ ಕುಂಭಾಭಿಷೇಕ, ಮಹಾಪೂರ್ಣಾಹುತಿ, ಮಹಾ ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಸ್ವಾಮಿಗೆ ರಜತ ಕಿರೀಟ ಧಾರಣೆ ಮಾಡಲಾಯಿತು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ದೇವಾಲಯದ ಬಳಿ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.